Dandeli| ರಾಜ್ಯದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಸಂಬಂಧಪಟ್ಟ RTO ಮತ್ತು ARTO ಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ಅವರು ಶುಕ್ರವಾರ ದಾಂಡೇಲಿಯಲ್ಲಿ ರೂ. 6.55 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಪ್ರಾದೇಶಿಕ ಕಚೇರಿಗಳಲ್ಲಿನ ಬಹುತೇಕ ಸಾರ್ವಜನಿಕ ಸೇವೆಗಳನ್ನು ಆನ್‌ಲೈನ್ ವ್ಯವಸ್ಥೆಗೊಳಿಸಲಾಗಿದ್ದು, ಸಾರಿಗೆ ಇಲಾಖೆಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಸಂಬಂಧಪಟ್ಟ ಕಚೇರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರಿಗೆ ಇಲಾಖೆಯಲ್ಲಿ ಸಮಗ್ರ ಸುಧಾರಣೆ ತರಲಾಗುತ್ತಿದ್ದು, ರಾಜ್ಯದ ಮತ್ತು ಬೇರೆ ರಾಜ್ಯಗಳ ವಾಹನಗಳು ಕಡ್ಡಾಯವಾಗಿ ಪ್ರಾದೇಶಿಕ ಸಾರಿಗೆ ಕಚೇರಿಗೆ ಬಂದರೇ ಮಾತ್ರವೇ ವಾಹನಗಳ ಫಿಟ್‌ನೇಸ್ ಆಗಲು ಜಿಯೋ ಫೆನಸಿಂಗ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಅರ್ಧದಷ್ಟು ವಾಣಿಜ್ಯ ವಾಹನಗಳ ಲೋಕೇಶನ್ ಟ್ರ್ಯಾಕಿಂಗ್ ಮಾಡಲಾಗಿದ್ದು, ಉಳಿದ ವಾಹನಗಳನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು.

ರಾಜ್ಯದ 31 ಜಿಲ್ಲೆಗಳಲ್ಲಿ ಆಟೋ ಟೆಸ್ಟಿಂಗ್ ಸ್ಟೇಷನ್ ಮಾಡಲು ಟೆಂಡರ್ ಕರೆಯಲಾಗಿದ್ದು, ಈಗಾಗಲೇ 3 ಟೆಂಡರ್‌ಗಳಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಉಳಿದ 2 ಟೆಂಡರ್‌ಗಳಿಗೆ ಮರು ಟೆಂಡರ್ ಕರೆಯಲಾಗಿದೆ ಇದರಿಂದಾಗಿ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳು ಆಟೋ ಟೆಸ್ಟಿಂಗ್ ಸ್ಟೇಷನ್‌ನಲ್ಲಿ ಸುಲಭವಾಗಿ ನಡೆಯಲಿವೆ ಎಂದರು.

ರಾಜ್ಯದಲ್ಲಿ ನಡೆದ ಸ್ಲೀಪರ್ ಬಸ್ ದುರಂತಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನೀತಿಯನ್ನು ಜಾರಿಗೊಳಿಸಿದ್ದು, ಅದರಂತೆ ಖಾಸಗಿ ಬಸ್‌ಗಳ ಮಾಲೀಕರಿಗೆ ಈ ತಿಂಗಳದ ಅಂತ್ಯದೊಳಗೆ ಸರ್ಕಾರ ಸೂಚಿಸಿರುವ ನಿಯಮಗಳಿಗೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸ್ಲೀಪರ್ ಬಸ್ ಗಳನ್ನು ಓಡಿಸಲು ಅನುಮತಿ ನೀಡಲಾಗುವುದು ಎಂದರು.

ಶಾಸಕ ಆರ್.ವಿ ದೇಶಪಾಂಡೆ, ಸಾರಿಗೆ ಇಲಾಖೆಯ ಅಪರ ಸಾರಿಗೆ ಆಯುಕ್ತ ಹಾಲಸ್ವಾಮಿ, ಬೆಳಗಾವಿ ವಿಭಾಗದ ಜಂಟಿ ಆಯುಕ್ತ ಸಿದ್ದಪ್ಪ ಕಲ್ಲೇರ ಮತ್ತಿತರರು ಉಪಸ್ಥಿತರಿದ್ದರು.