Sirsi|ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ದೀರ್ಘಕಾಲದಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್‌ನನ್ನು ಶಿರಸಿ ಗ್ರಾಮೀಣ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮಳಲಿ ನಿವಾಸಿ ಅರುಣ್ @ ಅರ್ಜುನ್ ಲಕ್ಷ್ಮಣ ಗೌಡ (28) ಬಂಧಿತ ಆರೋಪಿ. ಈತನ ಮೇಲೆ ಪೋಕ್ಸೋ, ಬಲಾತ್ಕಾರ, ಕೊಲೆ ಯತ್ನ, ಪೊಲೀಸರ ಮೇಲೆ ಹಲ್ಲೆ, ವಂಚನೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಪೋಸ್ಟ್ ಹಾಕಿದ ಆರೋಪದಡಿ ಶಿರಸಿ ಗ್ರಾಮೀಣ, ಬನವಾಸಿ ಮತ್ತು ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು.

ಆರೋಪಿಯ ವಿರುದ್ಧ ಮೂರು ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ (NBW-Non Bailable Warrant) ಜಾರಿಯಾಗಿತ್ತು. ಅಲ್ಲದೆ, ನ್ಯಾಯಾಲಯ ಈತನನ್ನು ‘ಘೋಷಿತ ಅಪರಾಧಿ’ ಎಂದು ಘೋಷಿಸಿದ್ದರೂ ಸಹ ವಿಚಾರಣೆಗೆ ಹಾಜರಾಗದೇ ತಪ್ಪಿಸಿಕೊಳ್ಳುತ್ತಿದ್ದನು. ಈತನ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿದ್ದರು.

ಆರೋಪಿಯು ಅರಣ್ಯ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ಸುತ್ತುವರಿದು ದಸ್ತಗಿರಿ ಮಾಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್., ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಹಾಗೂ ಶಿರಸಿ ಡಿಎಸ್‌ಪಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಶಿರಸಿ ಗ್ರಾಮೀಣ ಪಿಐ ರಮೇಶ್ ಹೂಗಾರ್ ನೇತೃತ್ವದ ತಂಡದಲ್ಲಿ ಪಿಎಸ್‌ಐಗಳಾದ ಸಂತೋಷ್‌ಕುಮಾರ್, ಅಶೋಕ್ ರಾಠೋಡ್ ಹಾಗೂ ಸಿಬ್ಬಂದಿಗಳಾದ ವಿಶ್ವೇಶ್ವರ ಹೆಗಡೆ, ಮಾಂತೇಶ ಬಾರಕೇರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.