Karwar| ಮುಂಗಾರು ಹಂಗಾಮಿನಲ್ಲಿ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ, ಹಿನ್ನೀರು ಹಾಗೂ ಸಮುದ್ರ ಆಧಾರಿತ ಸಾಹಸ ಮತ್ತು ಮನರಂಜನಾ ಚಟುವಟಿಕೆಗಳನ್ನು ಜೂನ್ 1ರಿಂದ ಆಗಸ್ಟ್ 31ರವರೆಗೆ ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆ ಲಕ್ಷ್ಮೀಪ್ರಿಯಾ ಕೆ ಆದೇಶ ಹೊರಡಿಸಿದ್ದಾರೆ.

ಮುಂಗಾರು ಅವಧಿಯಲ್ಲಿ ಭಾರೀ ಮಳೆ, ನದಿಗಳಲ್ಲಿ ನೀರಿನ ಹರಿವು ಹೆಚ್ಚಳ, ಆಕಸ್ಮಿಕ ಪ್ರವಾಹ, ಸಮುದ್ರದ ಅಲೆಗಳ ಅಬ್ಬರ, ಬಲವಾದ ಗಾಳಿ ಸೇರಿದಂತೆ ವಿವಿಧ ಹವಾಮಾನ ಸಂಬಂಧಿತ ಅಪಾಯಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಆದೇಶದ ಪ್ರಕಾರ ಜಿಲ್ಲೆಯಲ್ಲಿ ನದಿಗಳು, ಜಲಾಶಯಗಳು, ಹಿನ್ನೀರು ಪ್ರದೇಶಗಳು ಹಾಗೂ ಇತರ ಒಳನಾಡು ಜಲಮೂಲಗಳಲ್ಲಿ ರಾಫ್ಟಿಂಗ್, ಬೋಟಿಂಗ್, ಜೆಟ್ ಸ್ಕೀಯಿಂಗ್, ಕಯಾಕಿಂಗ್, ಬನಾನಾ ರೈಡ್, ಪ್ಯಾರಾಸೈಲಿಂಗ್, ಸ್ಪೀಡ್ ಬೋಟ್ ರೈಡ್ ಸೇರಿದಂತೆ ವಿವಿಧ ಜಲಕ್ರೀಡೆಗಳು, ಸ್ಕೂಬಾ ಡೈವಿಂಗ್ ಹಾಗೂ ಇತರೆ ನೀರೊಳಗಿನ ಮನರಂಜನಾ ಚಟುವಟಿಕೆಗಳಿಗೆ ನಿಷೇಧ ವಿಧಿಸಲಾಗಿದೆ.

ಇದಲ್ಲದೆ, ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಆಧಾರಿತ ಪ್ರವಾಸೋದ್ಯಮ, ಸಾಹಸ ಹಾಗೂ ಮನರಂಜನಾ ಚಟುವಟಿಕೆಗಳು ಮತ್ತು ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ಯಾವುದೇ ವಾಣಿಜ್ಯ ಅಥವಾ ಮನರಂಜನಾ ಕಾರ್ಯಕ್ರಮಗಳನ್ನು ನಡೆಸುವುದಕ್ಕೂ ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಕಲಂ 51ರಿಂದ 60ರ ಅಡಿಯಲ್ಲಿ ಹಾಗೂ ಇತರೆ ಅನ್ವಯಿಸುವ ಕಾನೂನುಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.