Honavar| ಮೀನುಗಾರಿಕೆಗೆ ತೆರಳಿದ‌ ಬೋಟ್ ಮುಳುಗಡೆಯಾಗಿ, ಅದರಲ್ಲಿದ್ದ ಏಳು ಮೀನುಗಾರರ ರಕ್ಷಣೆ ಮಾಡಿದ ಘಟನೆ‌ ಶನಿವಾರ ಹೊನ್ನಾವರದಲ್ಲಿ ನಡೆದಿದೆ‌

ಅಂಕೋಲಾದ ಬೆಳಂಬಾರದ ಅಭಿನಂದನ್ ಮಂಜುನಾಥ್ ಖಾರ್ವಿ ಅವರ ಮಾಲೀಕತ್ವದ ‘ಶ್ರೀ ನವರತ್ನ’ (IND KA 07 MM 2303) ಮೀನುಗಾರಿಕಾ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿದೆ‌.

ಬೋಟ್ ಬೆಳಂಬಾರ ಬಂದರಿನಿಂದ ಬೆಳಗ್ಗೆ 6 ಗಂಟೆಗೆ ಮೀನುಗಾರಿಕೆಗೆ ತೆರಳಿದ್ದು, ಹೊನ್ನಾವರ ಸಿಎಸ್ಪಿ ಪೊಲೀಸ್ ಠಾಣಾ ವ್ಯಾಪ್ತಿಯ ತಾರಿಬಾಗಿಲು ಸಮೀಪ, ಬಸವರಾಜ ದುರ್ಗಾ ದೀಪದಿಂದ ಸುಮಾರು 25 ಮೀಟರ್ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮಧ್ಯಾಹ್ನ ಸುಮಾರು 12 ಗಂಟೆಗೆ ಬೋಟ್‌ನ ಹೊರಭಾಗಕ್ಕೆ ಹಾನಿಯಾಗಿದೆ. ಪರಿಣಾಮವಾಗಿ ನೀರು ಬೋಟ್‌ನೊಳಗೆ ನುಗ್ಗಿ ಬೋಟ್ ಮುಳುಗಡೆಯಾಗಲು ಆರಂಭಿಸಿದೆ.

ಈ ವೇಳೆ ಬೋಟ್ ಮಾಲೀಕರು ಕಾಸರಕೋಡಿನ ‘ದರಿಯಾದೌಲತ್’ (IND KA 05 MM 1847) ಬೋಟ್ ಮಾಲೀಕ ಇಕ್ಬಾಲ್ ಅಬ್ದುಲ್ ಗಫೂರ್ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಪಂದಿಸಿದ ಇಕ್ಬಾಲ್ ಅವರು ತಮ್ಮ ಬೋಟ್ ಮೂಲಕ ಸ್ಥಳಕ್ಕೆ ತೆರಳಿ ಮುಳುಗಡೆಯಾಗುತ್ತಿದ್ದ ಬೋಟ್‌ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ಕಡಲ ತೀರಕ್ಕೆ ಕರೆತಂದಿದ್ದಾರೆ.

ರಕ್ಷಿಸಲ್ಪಟ್ಟವರಲ್ಲಿ ವೆಂಕಟೇಶ್ ಖಾರ್ವಿ, ನಾಗಪ್ಪ ಖಾರ್ವಿ, ಸಂದೀಪ್ ಖಾರ್ವಿ, ವಿಕಾಸ್ ಖಾರ್ವಿ, ವಿಘ್ನೇಶ್ ಖಾರ್ವಿ, ರಜತ್ ಬಾಣಾವಳಿಕರ್ ಹಾಗೂ ಲತೇಶ್ ಖಾರ್ವಿ ಸೇರಿದ್ದಾರೆ.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.