ಟಿ-20 ವಿಶ್ವಕಪ್ 2026ರ ಪಂದ್ಯಾವಳಿಯಲ್ಲಿ ಭಾರತದ ಪಯಣ ಮುಂದುವರಿಯಲಿ ಎಂದು ಪ್ರಾರ್ಥಿಸುತ್ತಿರುವ ಕ್ರೀಡಾ ಪ್ರೇಮಿಗಳು, ಇಂದಿನ (ಫೆ.26-ಗುರುವಾರ) ಭಾರತ ಮತ್ತು ಜಿಂಬಾಬ್ವೆ ಪಂದ್ಯದ ಫಲಿತಾಂಶದ ಬಗ್ಗೆ ಭಾರೀ ತಲೆಕೆಡಿಸಿಕೊಂಡಿದ್ದಾರೆ. ಕಳೆದ ಪಂದ್ಯಾಟದಲ್ಲಿ ಭಾರತ ಸೋಲಿನ ರುಚಿ ಕಂಡಿದ್ದರಿಂದ ಈ ಪಂದ್ಯಾಟದಲ್ಲಿ ಭಾರತೀಯ ತಂಡದ ಮುಂದೆ ದೊಡ್ಡ ಟಾಸ್ಕ್ ನಿರ್ಮಾಣವಾಗಿದೆ.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ತಮ್ಮ ಫಾರ್ಮ್‌ಗೆ ಮರಳಿದರೆ, ಜಿಂಬಾಬ್ವೆ ಧೂಳಿಪಟವಾಗಲಿದೆ ಎಂದು ಮಾತನಾಡಿಕೊಳ್ಳುತ್ತಿರುವ ಭಾರತೀಯ ಕ್ರಿಕೆಟ್ ಪ್ರೇಮಿಗಳು, ತಿಲಕ್ ವರ್ಮಾ ಕೂಡ ಅಬ್ಬರಿಸಲಿ ಎಂದು ಹಾರೈಸುತ್ತಿದ್ದಾರೆ.
ಹೆಚ್ಚು ರನ್ ರೇಟ್ ಗಳಿಸಿದ್ರೆ ಮಾತ್ರ ಭಾರತಕ್ಕೆ ಸೆಮಿಫೈನಲ್: ಈಗಾಗಲೇ ಸೂಪರ್ 8 ಹಂತದಲ್ಲಿ ಸೌತ್ ಆಫ್ರಿಕಾ ವಿರುದ್ಧ ಸೋತಿರುವ ಭಾರತ ಇಂದು ನಡೆಯುವ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಅನಿರ್ವಾತೆಯಲ್ಲಿದೆ. ಇಂದಿನ ಪಂದ್ಯದಲ್ಲಿ ಭಾರತ ಕೇವಲ ಗೆಲುವನ್ನಷ್ಟೇ ದಾಖಲಿಸಿದರೂ ಮುಂದಿನ ಹಂತಕ್ಕೆ ಅರ್ಹತೆ ಪಡೆಯುವ ಸಾಧ್ಯತೆ ಬಹಳಷ್ಟು ಕಡಿಮೆಯಿದೆ. ಆದರೆ, ಚೆನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವೆ ಏರ್ಪಡುವ ಟಿ-20 ಪಂದ್ಯದಲ್ಲಿ ಭಾರತ ಅತ್ಯಧಿಕ ರನ್ ರೇಟ್ ನಿಂದ ಗೆದ್ದರೆ ಮಾತ್ರ ಭಾರತ ತಂಡ ಸೆಮಿಪೈನಲ್ ಪ್ರವೇಶಿಸಲಿದೆ.
ಭಾರತಕ್ಕೆ ಅಭಿಷೇಕ್, ತಿಲಕ್ ತಲೆಬಿಸಿ…! ತಂಡಕ್ಕೆ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತು ನಂ.3 ಆಟಗಾರ ತಿಲಕ್ ವರ್ಮಾ ಅವರ ಕಳಪೆ ಫಾರ್ಮ್ ಭಾರೀ ತಲೆನೋವಾಗಿ ಪರಿಣಮಿಸಿದೆ.
ಹೌದು, ಐಸಿಸಿ ಟಿ-20ವಿಶ್ವಕಪ್ 2026ರಲ್ಲಿ ಟೀಂ ಇಂಡಿಯಾ ತನ್ನ ಪ್ರಯಾಣವನ್ನು ಮುಂದುವರಿಸಬೇಕಾದ್ರೆ, ಜಿಂಬಾಬ್ವೆ ವಿರುದ್ಧದ ಇಂದಿನ ಪಂದ್ಯವನ್ನು ಭಾರೀ ಅಂತರದಲ್ಲಿ ಗೆಲ್ಲಬೇಕು. ಹೆಚ್ಚಿನ ರನ್ ರೇಟ್ ಮಾತ್ರ ಭಾರತವನ್ನು ಸೆಮಿಫೈನಲ್‌ಗೆ ಕರೆದುಕೊಂಡು ಹೋಗಬಲ್ಲದು. ಈ ಹಿನ್ನೆಲೆಯಲ್ಲಿ ಜಿಂಬಾಬ್ವೆಯನ್ನು ಮಣಿಸಲು ಭಾರತ ತಂಡ ಸಜ್ಜಾಗುತ್ತಿದೆ.
ಆದರೆ, ಭಾರತ ತಂಡ ಈಗ ಅತಿಯಾಗಿ ಚಿಂತಿಸುತ್ತಿರುವುದು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಮತ್ತು ಮೂರನೇ ಕ್ರಮಾಂಕದಲ್ಲಿ ಆಡುವ ತಿಲಕ್ ವರ್ಮಾ ಅವರ ಕಳಪೆ ಫಾರ್ಮ್. ಅದರಲ್ಲೂ ಟೀಂ ಇಂಡಿಯಾದ ಬ್ಯಾಟಿಂಗ್ ಸ್ಟಾರ್ ಅಭಿಷೇಕ್ ಶರ್ಮಾ ಕಳೆದ ನಾಲ್ಕು ಪಂದ್ಯಗಳ ಪೈಕಿ ಮೂರು ಪಂದ್ಯಗಳಲ್ಲಿ ಗಳಿಸಿರೋದು ಸೊನ್ನೆ.
ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ ಭಾರೀ ಅಂತರದಲ್ಲಿ ಗೆಲ್ಲಬೇಕಾದರೆ, ಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ತೋರಲೇಬೇಕಿದೆ. ತಿಲಕ್ ವರ್ಮಾ ಕೂಡ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಜಿಂಬಾಬ್ವೆ ವಿರುದ್ಧದ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ನಿರ್ಮಾಣ ಮಾಡಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಈ ಇಬ್ಬರೂ ಆಟಗಾರರು ಸೇರಿದಂತೆ ಸಂಪೂರ್ಣ ತಂಡ ಆಡಬೇಕಿದೆ.
ಆಟಗಾರರ ಪರವಾಗಿ ಕೋಚ್: ಈ ಮಧ್ಯೆ ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರು, ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಅವರ ಬೆಂಬಲಕ್ಕೆ ಧಾವಿಸಿದ್ದಾರೆ. ಇಬ್ಬರೂ ಆಟಗಾರರು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ತಮ್ಮ ಫಾರ್ಮ್‌ಗೆ ಮರಳಿ ಪಡೆಯಲಿದ್ದಾರೆ ಎಂದು ಸಿತಾಂಶು ಕೋಟಕ್ ಭರವಸೆ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಅಂತರದ ಹೀನಾಯ ಸೋಲು ಅನುಭವಿಸುವ ಮೂಲಕ ಮೈನಸ್ ರನ್ ರೇಟ್‌ಲ್ಲಿರುವ ಭಾರತ, ಪ್ಲಸ್ ರನ್ ರೇಟ್‌ಗಾಗಿ ಸೂಪರ್-8ನಲ್ಲಿ ಉಳಿದಿರುವ ತನ್ನೆರೆಡೂ ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆಲ್ಲಬೇಕಿದೆ. ಈ ಕುರಿತು ಮಾತನಾಡಿರುವ ಸಿತಾಂಶು ಕೋಟಕ್, “ನಾವು ಸೆಮಿಫೈನಲ್ ಗುರಿಗೆ ತಕ್ಕಂತೆ ಕಾರ್ಯತಂತ್ರವನ್ನು ರೂಪಿಸಿದ್ದು, ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಈ ಕಾರ್ಯತಂತ್ರಕ್ಕೆ ತಕ್ಕಂತ ಉತ್ತಮ ಪ್ರದರ್ಶನ ನೀಡಲಿದ್ದಾರೆ” ಎಂದು ಭವಿಷ್ಯ ನುಡಿದಿದ್ದಾರೆ.
ಮೂರು ಡಕ್ ಹೊರತಾಗಿಯೂ ಅಭಿಷೇಕ್ ಶರ್ಮಾ ಐಸಿಸಿ ಟಿ-20 ರ‍್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಟೀಂ ಇಂಡಿಯಾದ ಈ ಸ್ಪೋಟಕ ಬ್ಯಾಟ್ಸಮನ್ 877 ರೇಟಿಂಗ್ ಅಂಕಗಳನ್ನು ಹೊಂದಿದ್ದಾರೆ. ಇದು ಅವರ ಕಳಪೆ ಫಾರ್ಮ್ ತಾತ್ಕಾಲಿಕ ಎಂಬ ಭರವಸೆ ಮೂಡಿಸಿದೆ.
ಒಟ್ಟಿನಲ್ಲಿ ಇಡೀ ಟೀಂ ಇಂಡಿಯಾ ಒಂದು ತಂಡವಾಗಿ ಸಂಘಟಿತ ಪ್ರಯತ್ನದ ಮೂಲಕ ತನ್ನ ಸೆಮಿಫೈನಲ್ ಕನಸನ್ನು ನನಸಾಗಿಸಿಕೊಳ್ಳಲಿ ಎಂಬುದು ಎಲ್ಲರ ಆಶಯ.
