Karwar|Holy Celebration|
ಹೋಳಿ ಹಬ್ಬ ಕಾರವಾರಿಗರು ಅತ್ಯಂತ ಸಂಭ್ರಮದಿಂದ ಅತ್ಯಂತ ಜೋಶ್ ಭರಿತವಾಗಿ ಆಚರಿಸುವ ಬಣ್ಣದ ಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ಕಾರವಾರದ ಜನತೆ ರಂಗು ರಂಗಿನ ಹೋಳಿ ಹಬ್ಬದಲ್ಲಿ ಬಣ್ಣದ ಸಂಭ್ರಮದಲ್ಲಿ ಮಿಂದೆದ್ದರು.

ಮುಂಜಾನೆಯಿಂದಲೇ ಯುವಕರ ಗುಂಪುಗಳು ನಗರದಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪರಸ್ಪರ ಬಣ್ಣ ಹಚ್ಚಿಕೊಂಡು ‘ಹ್ಯಾಪಿ ಹೋಳಿ’ ಎಂದು ಶುಭಾಶಯ ಕೋರಿ ಹಬ್ಬದ ಉತ್ಸಾಹ ಹಂಚಿಕೊಂಡರು. ಯುವಕ – ಯುವತಿಯರು, ಸ್ನೇಹಿತರು ಹಾಗೂ ಸಂಬಂಧಿಕರೊಂದಿಗೆ ಹಾಡುಗಳಿಗೆ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.
ಹಿರಿಯರು – ಕಿರಿಯರು ಎಂಬ ಬೇಧವಿಲ್ಲದೆ ಎಲ್ಲರೂ ಓಕುಳಿಯಾಟದಲ್ಲಿ ಪಾಲ್ಗೊಂಡ ದೃಶ್ಯ ಎಲ್ಲೆಡೆ ಕಣ್ಣಿಗೆ ಬೀಳುತ್ತಿತ್ತು. ಬೈಕ್ನಲ್ಲಿ ಸಾಗುತ್ತಿದ್ದವರು, ದಾರಿ ಹೋಕರು ಕೂಡ ಬಣ್ಣಗಳ ಮಳೆ ತಪ್ಪಿಸಿಕೊಳ್ಳಲಾಗದೆ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ನಗರದಲ್ಲಿನ ಕೆಲವೆಡೆ ಡಿಜೆ ಸಾಂಗ್ಸ್ಗೆ ತಾಳ ಹಾಕಿ ಯುವಕರು ಕುಣಿದು ಹೋಳಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

ರವೀಂದ್ರನಾಥ ಟ್ಯಾಗೋರ್ ಕಡಲತೀರ ಹೋಳಿ ಸಂಭ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಸಾವಿರಾರು ಮಂದಿ ಕಡಲತೀರದಲ್ಲಿ ಸೇರಿ ಬಣ್ಣಗಳ ಆಟದ ನಂತರ ಸಮುದ್ರಸ್ನಾನ ಮಾಡಿ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.
ಕಾರವಾರದಲ್ಲಿ ಹೋಳಿ ಎಂದರೆ ಬಣ್ಣಗಳ ಜೊತೆ ಸಮುದ್ರ ಸ್ನಾನವೂ ಕೂಡಾ ವಿಶೇಷ. ಮನೆಮಂದಿ, ಸ್ನೇಹಿತರೆಲ್ಲರೂ ಸೇರಿ ಹೋಳಿ ಆಡಿದ ಬಳಿಕ ಕಡಲತೀರಕ್ಕೆ ಬಂದು ಸ್ನಾನ ಮಾಡುವುದು ಬೇರೆಲ್ಲೂ ಸಿಗದ ಒಂದು ವಿಶಿಷ್ಠವಾದ ಅನುಭವವಾಗಿದೆ.

ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಬೆಳಗ್ಗಿನಿಂದಲೇ ನಗರದ ಬಹುತೇಕ ಅಂಗಡಿ-ಮುಂಗಟ್ಟುಗಳು ಅಘೋಷಿತ ಬಂದ್ ಆಗಿದ್ದವು. ಇದರಿಂದ ವ್ಯಾಪಾರ ವಹಿವಾಟಿನಲ್ಲಿ ಸ್ವಲ್ಪಮಟ್ಟಿನ ವ್ಯತ್ಯಯ ಕಂಡುಬಂತು. ಪ್ರಮುಖ ಬೀದಿಗಳಲ್ಲಿ ಓಕುಳಿಯಾಟದಲ್ಲಿ ತೊಡಗಿದ್ದ ಯುವಕರ ಗುಂಪುಗಳನ್ನು ಹೊರತುಪಡಿಸಿದರೆ ಜನಸಂಚಾರವೂ ವಿರಳವಾಗಿತ್ತು.
ಒಟ್ಟಾರೆ, ಬಣ್ಣಗಳ ಸಡಗರ, ಸ್ನೇಹದ ಹಬ್ಬ ಮತ್ತು ಸಮುದ್ರಸ್ನಾನದ ವಿಶೇಷತೆಯೊಂದಿಗೆ ಕಾರವಾರದಲ್ಲಿ ಹೋಳಿ ಹಬ್ಬ ಅದ್ಧೂರಿಯಾಗಿ ನೆರವೇರಿತು. ಕರಾವಳಿಯ ಈ ವೈಶಿಷ್ಟ್ಯಪೂರ್ಣ ಆಚರಣೆ ಸ್ಥಳೀಯರಿಗೂ, ಪ್ರವಾಸಿಗರಿಗೂ ಮರೆಯಲಾಗದ ಅನುಭವವಾಗಿ ಉಳಿಯಿತು.
