ಭಟ್ಕಳ: ನಮಾಜ್ ಮಾಡಲು ತಾಲೂಕಿನ ನೂರಪಳ್ಳಿ ಮಸೀದಿಗೆ ಹೋಗಿ ನಾಪತ್ತೆಯಾಗಿದ್ದ ಜಾಕೀರ್ ಬೇಗ್ ಎಂಬಾತನನ್ನು 3 ತಿಂಗಳ ಬಳಿಕ ಭಟ್ಕಳ ಶಹರ ಠಾಣೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಕುಮಟಾದ ಚಿತ್ರಗಿಯ ನಿವಾಸಿಯಾಗಿದ್ದ ಜಾಕಿರ್ ಬೇಗ್ (33), ವಿದೇಶದಲ್ಲಿ ಕೆಲಸ ಮಾಡುತ್ತಿದ್ದು, ಮದುವೆ ನಿಶ್ಚಯದ ಹಿನ್ನೆಲೆ ಊರಿಗೆ ಬಂದಿದ್ದ. ಮದುವೆ ಖರೀದಿಗೆ ಈತನ ಬಳಿ ಕೇವಲ ಒಂದೂವರೆ ಲಕ್ಷ ರೂ. ಮಾತ್ರ ಹಣವಿತ್ತು. ಮೊದಲ ದಿನ ಬಟ್ಟೆ ಬರೆಗಳನ್ನು ಖರೀದಿ ಮಾಡಿದ ಬಳಿಕ ಮರುದಿನ ಅಣ್ಣ ಗಪೂರ್‌ ಬೇಗ್ ನ ಪತ್ನಿ ಶಾಹೀನ್ ಹಾಗೂ ಆಕೆಯ ಪುತ್ರಿ ಮೆಹಕ್ ಜತೆ ಮದುವೆಗೆ ಚಿನ್ನ ಖರೀದಿಸಲು ಭಟ್ಕಳಕ್ಕೆ ತೆರಳಿದ್ದ.

ಆದರೆ, ಶುಕ್ರವಾರದ ನಮಾಜ್ ಗಾಗಿ ಭಟ್ಕಳ ತಾಲೂಕಿನ ನೂರಪಳ್ಳಿಯ ಮಸೀದಿಗೆ ಹೋಗಿ ಬರುತ್ತೇನೆ ಎಂದು ಸಬೂಬು ನೀಡಿ ತೆರಳಿದ್ದ. ನಮಾಜ್ ಮುಗಿದರೂ ಬಾರದ ಜಾಕೀರ್‌ನನ್ನು ಹುಡುಕಾಡಿದ ಶಾಹಿನ್ ಬಳಿಕ ತನ್ನ ಗಂಡನಿಗೆ ತಿಳಿಸಿದ್ದಳು.

ಅದಾಗಲೇ ಕೈಯಲ್ಲಿ ಹಣವಿಲ್ಲವೆಂದು ಜಾಕೀರ್, ನಾಚಿಗೆಯಿಂದ ಬೇರೆ ಬಸ್ ಹತ್ತಿ ತುಮಕೂರಿನತ್ತ ಪ್ರಯಾಣ ಬೆಳೆಸಿದ್ದ. ಇತ್ತ ಜಾಕೀರ್ ಸಾಬ್ ಸಿಗದೇ ಇದ್ದಾಗ ಆತನ ಪತ್ತೆಗೆ ಕುಟುಂಬಸ್ಥರು ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾಣೆಯಾದವನ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಮ್.ಎನ್ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ದಿವಾಕರ ಪಿ.ಮ್. ಹಾಗೂ ಪಿ.ಎಸ್.ಐ ನವೀನ ನಾಯ್ಕ ಮತ್ತು ಸಿಬ್ಬಂದಿ ರವಿ ಪಟಗಾರ , ಕಾಶಿನಾಥ ಕೊಟಗುಣಸಿಯವರ ತಂಡ ರಚಿಸಲಾಗಿತ್ತು.

ಕೊನೆಗೂ ನಾಪತ್ತೆಯಾಗಿದ್ದ ಜಾಕೀರ್ ಬೇಗ್ ತನ್ನ ಮೊಬೈಲ್ ಮಾರಿ ಗುರುತು ಸಿಗದಂತೆ ತುಮಕೂರಿನ ಒಂದು ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಭಟ್ಕಳ ಶಹರ ಪೊಲೀಸರು ಕಲೆ ಹಾಕಿದ್ದರು. ಕೊನೆಗೂ ಆತನನ್ನು ಪತ್ತೆ ಹಚ್ಚಿ, ಆತನ ಕುಟುಂಬಸ್ಥರು ಮನವೊಲಿಸಿ ಕರೆತಂದಿದ್ದು, ಮಾರ್ಯಾದೆಗೆ ಅಂಜಿ ಕಾಣೆಯಾಗಿದ್ದ ಯುವಕ ಕೊನೆಗೂ ಕುಟುಂಬದ ಜತೆ ಸೇರಿದ್ದಾನೆ.