ಸಿದ್ದಾಪುರ: ಅಸಲಿ ಬಂಗಾರ ನೀಡುವುದಾಗಿ ನಂಬಿಸಿ 1 ಕೆ.ಜಿ. ತೂಕದ ನಕಲಿ ಚಿನ್ನದ ನಾಣ್ಯಗಳನ್ನು ನೀಡಿ ಬರೋಬ್ಬರಿ 10 ಲಕ್ಷ ರೂ. ವಂಚಿಸಿದ್ದ ಅಂತರ-ಜಿಲ್ಲಾ ಆರೋಪಿಯನ್ನು ಸಿದ್ದಾಪುರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಮುದ್ದೇಶನಹಳ್ಳಿ ನಿವಾಸಿ ಗಜೇಂದ್ರ ಬಿನ್ ಹಾಲೇಶಪ್ಪ ಕೊರಚರ (34) ಬಂಧಿತ ಆರೋಪಿ. ಆರೋಪಿಯು ವ್ಯಕ್ತಿಯೊರ್ವರಿಗೆ ಅಸಲಿ ಬಂಗಾರ ಕೊಡುವುದಾಗಿ ನಂಬಿಸಿದ್ದರು. ನಂತರ ಸುಮಾರು 1 ಕೆ.ಜಿ. ತೂಕದ ನಕಲಿ ಬಂಗಾರದ ನಾಣ್ಯ (ಬಿಲ್ಲೆ)ಗಳನ್ನು ನೀಡಿ ವ್ಯಕ್ತಿಯಿಂದ 10 ಲಕ್ಷ ರೂ. ನಗದು ಪಡೆದು ಪರಾರಿಯಾಗಿದ್ದರು. ಈ ಬಗ್ಗೆ ವಂಚನೆಗೊಳಗಾದವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ  ದಾಖಲಾಗಿತ್ತು.

ಭಾರಿ ಮೊತ್ತದ ಈ ವಂಚನೆ ಪ್ರಕರಣವನ್ನು ಭೇದಿಸಲು ಹಿರಿಯ ಅಧಿಕಾರಿಗಳ ಆದೇಶದಂತೆ ಪ್ರತ್ಯೇಕ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಆರೋಪಿಗಳ ಪತ್ತೆಗಾಗಿ ಬನವಾಸಿ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಶಿಕಾರಿಪುರ, ಶಿರಾಳಕೊಪ್ಪ ಕಡೆಗಳಲ್ಲಿ ಜಾಲಬೀಸಿದ್ದ ಪೊಲೀಸರು, ಖಚಿತ ಮಾಹಿತಿ ಹಾಗೂ ತಾಂತ್ರಿಕ ಬೆಂಬಲದೊಂದಿಗೆ ಪ್ರಮುಖ ಆರೋಪಿ ಗಜೇಂದ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯಿಂದ ವಂಚನೆಯಿಂದ ಪಡೆದಿದ್ದ 10,00,000 ರೂ. ನಗದು ಹಣ, ಕೃತ್ಯಕ್ಕೆ ಬಳಸಿದ್ದ ಅಂದಾಜು 20 ಸಾವಿರ ರೂ. ಮೌಲ್ಯದ ಬಜಾಜ್ ಡಿಸ್ಕವರಿ ಬೈಕ್  ಹಾಗೂ ಒಂದು ಕೀಪ್ಯಾಡ್ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಹಾಗೂ ಶಿರಸಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಸಿದ್ದಾಪುರ ಠಾಣೆಯ ಪೊಲೀಸ್ ನಿರೀಕ್ಷಕ ಜೆ.ಬಿ. ಸೀತಾರಾಮ ಮತ್ತು ಪಿ.ಎಸ್.ಐ ಶಾಂತಿನಾಥ ಕೆ. ಪಾಸಾನೆ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ರಮೇಶ ಕೂಡಲ, ಚೇತನಕುಮಾರ, ಸಂತೋಷ ತಳವಾರ, ಮೋಹನ ಗಾವಡಿ, ಮಣಿಕಂಠ, ಪ್ರಶಾಂತ, ರೋಹಿತ ಹಾಗೂ ಗಿರೀಶ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ತ್ವರಿತವಾಗಿ ಪತ್ತೆಹಚ್ಚಿದ ಸಿದ್ದಾಪುರ ಪೊಲೀಸ್ ತಂಡದ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.