ಕಾರವಾರ: ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ಸಾರ್ವಜನಿಕ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಜೂಜಾಟ ನಡೆಸುತ್ತಿದ್ದವರ ಮೇಲೆ ಕಾರವಾರ ಗ್ರಾಮೀಣ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತರನ್ನು ಹಬ್ಬುವಾಡ ನಿವಾಸಿಗಳಾದ ಶರಣಪ್ಪ ಪರಸಪ್ಪ ಕಬ್ಬುರಗಿ (40) ಹಾಗೂ ದ್ಯಾಮಣ್ಣ ಬಸಪ್ಪ ಗೊಣ್ಣರ (37) ಎಂದು ಗುರುತಿಸಲಾಗಿದೆ. ಮತ್ತೋರ್ವ ಆರೋಪಿ ದಾಳಿ ವೇಳೆ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಗಳಿಂದ ₹920 ನಗದು ಹಾಗೂ ಜೂಜಾಟಕ್ಕೆ ಬಳಸುತ್ತಿದ್ದ ಇಸ್ಪೀಟ್ ಎಲೆಗಳು ಸೇರಿದಂತೆ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 87ರಡಿ ಪ್ರಕರಣ ದಾಖಲಾಗಿದೆ.