Ankola: ತಾಲೂಕಿನ ಅವರ್ಸಾದಲ್ಲಿ ಕಾತ್ಯಾಯನಿ ಕ್ರಿಕೆಟರ್ಸ್ ಆಶ್ರಯದಲ್ಲಿ ಆಯೋಜಿಸಲಾದ ಅವರ್ಸಾ ಕ್ರಿಕೆಟ್ ಲೀಗ್–2026 (ಶ್ರೀ ಭೂದೇವಿ ಕಪ್) ಸೀಸನ್–2 ಯಶಸ್ವಿಯಾಗಿ ಪೂರ್ಣಗೊಂಡಿತು.
ಏ. 17ರಿಂದ 19ರವರೆಗೆ ಕಾತ್ಯಾಯನಿ ಹೈಸ್ಕೂಲ್ ಮೈದಾನದಲ್ಲಿ ನಡೆದ ಈ ಮೂರು ದಿನಗಳ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿ ರೋಚಕ ಪಂದ್ಯಗಳ ಮೂಲಕ ಕ್ರೀಡಾಭಿಮಾನಿಗಳನ್ನು ರಂಜಿಸಿತು.

ಸಾಹೀಶ್ ಹಾಗೂ ಮಾರುತಿ ನಾಯ್ಕ ಮಾಲಿಕತ್ವದ ಲಕ್ಷ್ಮೀ ನಾರಾಯಣ ವಾರಿಯರ್ಸ್ ತಂಡವು ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿದರೆ, ಸೂರಜ್ ನಾಯ್ಕ ಮತ್ತು ಶ್ರೀಗಣೇಶ ನಾಯಕರ ಮಾಲಿಕತ್ವದ ಲಕ್ಷ್ಮೀ ನಾರಾಯಣ ರಾಕರ್ಸ್ ತಂಡ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. ರೈಲ್ವೆ ಸ್ಟಾರ್ಸ್ ಅವರ್ಸಾ ತೃತೀಯ ಹಾಗೂ ಕಾತ್ಯಾಯನಿ ವಾರಿಯರ್ಸ್ ಅವರ್ಸಾ ಚತುರ್ಥ ಸ್ಥಾನ ಗಳಿಸಿತು.
ಇತರೆ ತಂಡಗಳಾದ ನಾಗದೇವತಾ ಹಂಟರ್ಸ್ ಸಕಲಬೇಣ, ಮಹಾಸತಿ ಹಿಟ್ಟರ್ಸ್, ಶ್ರೀ ಉಮಾ ಮಹೇಶ್ವರ ದಂಡೆಬಾಗ, ಅವರ್ಸಾ ಇಂಡಿಯನ್ಸ್ ಸೇರಿದಂತೆ ಒಟ್ಟು ಎಂಟು ತಂಡಗಳು ಉತ್ತಮ ಪ್ರದರ್ಶನ ನೀಡಿದವು.
ಟೂರ್ನಿಯ ಬಹುಮಾನವಾಗಿ ಪ್ರಥಮ ₹40 ಸಾವಿರ, ದ್ವಿತೀಯ ₹30 ಸಾವಿರ, ತೃತೀಯ ₹20ಸಾವಿರ, ಮತ್ತು ಚತುರ್ಥ ₹10 ಸಾವಿರ ನಗದು ಬಹುಮಾನಗಳನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರು ನೀಡಿ ಕ್ರೀಡಾಭಿವೃದ್ಧಿಗೆ ಉತ್ತೇಜನ ನೀಡಿದರು. ಮುಂದಿನ ವರ್ಷವೂ ಈ ನಾಲ್ಕು ನಗದು ಬಹುಮಾನಗಳನ್ನು ತಾವೇ ನೀಡುವುದಾಗಿ ಅವರು ಘೋಷಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೂಪಾಲಿ ನಾಯ್ಕ, ಗ್ರಾಮೀಣ ಯುವಕರಲ್ಲಿ ಕ್ರೀಡಾಸ್ಫೂರ್ತಿಯನ್ನು ಬೆಳೆಸುವಲ್ಲಿ ಇಂತಹ ಕ್ರೀಡಾಕೂಟಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು. ಅವರ ಕ್ರೀಡಾ ಪ್ರೋತ್ಸಾಹ ಹಾಗೂ ನಿರಂತರ ಬೆಂಬಲವನ್ನು ಸಂಘಟಕರು ಪ್ರಶಂಸಿಸಿದರು.
ಈ ವೇಳೆ ರೂಪಾಲಿ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಬಹುಮಾನ ವಿತರಣೆಯನ್ನು ಉದ್ದಿಮೆದಾರ ಪರಬತ್ ಎಸ್. ನಾಯ್ಕ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಉದ್ದಿಮೆದಾರ ತುಳಸಿದಾಸ ಕಾಮತ, ನಿವೃತ್ತ ಸರಕಾರಿ ನೌಕರರ ಸಂಘ ಅವರ್ಸಾ ಅಧ್ಯಕ್ಷ ಸುಭಾಷ್ ನಾಯಕ, ಕ್ಷತ್ರಿಯ ಕೋಮಾರಪಂಥ ಸರ್ಕಾರಿ ನೌಕರರ ಸಂಘ ಅಂಕೋಲಾ ಉಪಾಧ್ಯಕ್ಷ ರಾಜೇಶ್ ಗಜಾನನ ನಾಯ್ಕ, ಹಾರವಾಡ ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ್ ಟಾಕೇಕರ, ಅವರ್ಸಾ ಗ್ರಾ.ಪಂ. ಮಾಜಿ ಸದಸ್ಯ ಅನಂತ ಭಟ್, ಉದ್ದಿಮೆದಾರ ಗಣೇಶ ಸೋಮಾ ನಾಯ್ಕ, ಮಾಜಾಳಿ ಗ್ರಾ.ಪಂ. ಕಾರ್ಯದರ್ಶಿ ವಸಂತ ಎಂ ನಾಯ್ಕ, ಕುಮಟಾ ನಾರಾಯಣಿ ಟೋಟಲ್ ಡಿಸ್ಟ್ರಿಬ್ಯೂಟರ್ ಸೂರಜ್ ಪಿ ನಾಯಕ, ಹಾರವಾಡ ’96’ ಪರ್ಶಿಯನ್ ಬೋಟ್ ಮಾಲಕ ವಿಶಾಲ ವಿ ಬಾನಾವಳಿಕರ, ಪ್ರಸಾದ ಗಜಾನನ ನಾಯ್ಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
