Karwar| ಗೇರು ಹಣ್ಣಿನ ಸೀಸನ್ ಆರಂಭವಾಗುತ್ತಿದ್ದಂತೆ, ಅಪ್ಪಟ ದೇಶೀಯ ಡ್ರಿಂಕ್ಸ್ ‘ಉರಾಕ್’ ಪ್ರೀಯರಲ್ಲಿ ಒಂದು ರೀತಿಯ ಸಂಭ್ರಮ ಮನೆ ಮಾಡುತ್ತದೆ.
ಸ್ಥಳೀಯ ‘ಪಾನ ಪ್ರೀಯರ’ ದೇಸಿ ಸಂಸ್ಕೃತಿಯೊಂದಿಗೇ ಬೆಸೆದುಕೊಂಡಿರುವ ಉರಾಕ್, ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳವರೆಗೆ ಮಾತ್ರ ದೊರೆಯುತ್ತದೆ. ಗೇರು ಹಣ್ಣು ಸೀಸನ್ ಇರುವ ಸಮಯದಲ್ಲೇ ಇದನ್ನು ತಯಾರಿಸಲಾಗುವುದರಿಂದ ವರ್ಷದಲ್ಲಿ ಮೂರು ತಿಂಗಳುಗಳಷ್ಟೇ ಈ ಪಾನೀಯ ಲಭ್ಯ.

ಉರಾಕ್ ಎಂಬುದು ದೇಶಿಯ ಪಾನೀಯ. ಉರಾಕ್ ನ್ನು ಗೇರು ಮರಗಳು ತೋಪು ಎಲ್ಲಿ ಹೆಚ್ಚಾಗಿರುತ್ತದೆಯೋ ಅಲ್ಲಿ ಮಾತ್ರ ತಯಾರಿಸುತ್ತಾರೆ. ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಈ ಮೊದಲು ತಯಾರಿಸುತಿದ್ದರು. ಈಗೀನ ಕಾನೂನು ಕಟ್ಟಲೆಗಳ ಸಂಕೋಲೆಯ ಹಿನ್ನೆಲೆ, ಈ ದೇಶಿ ಪಾನೀಯ ತಯಾರಿಸುವುದನ್ನು ಬಿಟ್ಟಿದ್ದಾರೆ. ಗೋವಾ ಅತ್ಯಧಿಕ ಗೇರು ತೋಪು ಹೊಂದಿರುವ ಪ್ರದೇಶವಾಗಿದೆ, ಇಲ್ಲಿನ ಸರ್ಕಾರಗಳು ಮದ್ಯ ಮಾರಾಟದ ಮೇಲೆ ಕಠಿಣ ನಿರ್ಬಂಧ ವಿಧಿಸದ ಹಿನ್ನಲೆಯಲ್ಲಿ ಭಾರಿ ಪ್ರಮಾಣದ ಉರಾಕ್ ಉತ್ಪಾದನೆ ಮಾಡಲಾಗುತ್ತದೆ.
ಈಗ ‘ಉರಾಕ್’ ಸೀಸನ್ ಆರಂಭವಾಗಿದ್ದು, ಇದಕ್ಕೆ ಹೆಚ್ಚಾಗಿ ಉರಾಕ್‌ಗೆ ಲಿಮ್ಕಾ ಬೆರಸಿ ಕುಡಿಯುವುದು ವಾಡಿಕೆ. “ಉರಾಕ್ ಗೆ ಲಿಮ್ಕಾ ಸೇರಿಸಿ, ಅರ್ಧ ಲಿಂಬು ಹಿಂಡಿ, ನಡು ಸೀಳಿದ ಹಸಿಮೆಣಸನ್ನೊಮ್ಮೆ ಲಿಮ್ಕಾ ಮಿಶ್ರಿತ ಉರಾಕ್ ನಲ್ಲಿ ತಿರುಗಿಸಿ ಕುಡಿದರೆ ಆಹಾ….. ಸ್ವರ್ಗಕ್ಕೆ ಮೂರೇ ಗೇಣು..” ಎನ್ನುತ್ತಾರೆ ಉರಾಕ್ ಪ್ರಿಯರು.
ಈ ಹಿನ್ನೆಲೆ ಉರಾಕ್ ಸೀಸನ್ ಆರಂಭವಾಗುತ್ತಿದ್ದಂತೆಯೇ ಕರಾವಳಿ ಭಾಗದ ಅಂಗಡಿಗಳಲ್ಲಿ ಲಿಮ್ಕಾ ಪಾನೀಯಕ್ಕೆ ಬೇಡಿಕೆ ಹೆಚ್ಚುತ್ತಿರುವುದು ಗಮನಾರ್ಹ. ಆದರೆ ಈ ಬಾರಿ ಉರಾಕ್ ಸೀಸನ್ ಆರಂಭದಲ್ಲೇ ಮಾರುಕಟ್ಟೆಯಲ್ಲಿ ಲಿಮ್ಕಾ ಕೊರತೆ ಕಾಣಿಸಿಕೊಂಡಿದ್ದು, ಇದು ಉರಾಕ್ ಪ್ರಿಯರ ಮುಖದಲ್ಲಿ ಚಿಂತೆಯ ರೇಖೆ ಮೂಡಿಸಿದೆ. ಕೆಲ ಉರಾಕ್ ಪ್ರಿಯರು ಹಾಸ್ಯವಾಗಿ, ‘ಉರಾಕ್’ ಇದೆ… ಗ್ಲಾಸ್ ಇದೆ… ಸ್ನೇಹಿತರೂ ಇದ್ದಾರೆ… ಆದರೆ ಲಿಮ್ಕಾನೇ ಇಲ್ಲ! ಏನು ಮಾಡೋದು?” ಎನ್ನುತ್ತಿದ್ದಾರೆ.
‘ಉರಾಕ್’ ಪ್ರಿಯರ ಪ್ರಕಾರ ಸೋಡಾ, ಪೆಪ್ಸಿ ಇತರೆ ಸಾಫ್ಟ್ ಡ್ರಿಂಕ್ಸ್ ಗಳಿಗಿಂತಲೂ ಉರಾಕ್ ಗೆ ಲಿಮ್ಕಾ ಬೆರೆಸಿದರೆ ಅದರ ಗಮ್ಮತ್ತೇ ಬೇರೆ. ಲಿಮ್ಕಾ-ಉರಾಕ್ ಕಾಂಬಿನೇಶನ್ ಒಂದು ರೀತಿ ಚಹಾದ ಜೊತೆ ಚೂಡಾ ಇದ್ದಂಗೆ ಅನ್ನುತ್ತಾರೆ.
‘ಮಧ್ಯಪ್ರಾಚ್ಯ ಬಿಕ್ಕಟ್ಟು ಯಾವಾಗ ಪರಿಹಾರ ಆಗುತ್ತೋ ಗೊತ್ತಿಲ್ಲ… ಆದರೆ ಈ ‘ಉರಾಕ್’ ಸೀಸನ್ ನಲ್ಲಿ ಮೊದಲು ಲಿಮ್ಕಾ ಬಿಕ್ಕಟ್ಟು ಪರಿಹಾರ ಆಗ್ಬೇಕು! ಲಿಮ್ಕಾದ ‘ಡಿಮ್ಯಾಂಡ್ ಆ್ಯಂಡ್ ಸಪ್ಲೈ’ (ಬೇಡಿಕೆ ಮತ್ತು ಪೂರೈಕೆ) ಸರಿಯಾಗಿರಲಿ ಎಂಬುದು ‘ಉರಾಕ್’ ಪ್ರೀಯರ ಪ್ರೀತಿಯ ಹಕ್ಕೋತ್ತಾಯ ಅಷ್ಟೇ🍹
