Karwar| ಮಧ್ಯಪ್ರಾಚ್ಯ ಬಿಕ್ಕಟ್ಟಿನ ಪರಿಣಾಮವಾಗಿ ಅಡುಗೆ ಅನಿಲ ಸರಬರಾಜಿನಲ್ಲಿ ವ್ಯತ್ಯಯ ಕಂಡು ಬರುತ್ತಿದ್ದು, ಇದರಿಂದ ಪರ್ಯಾಯ ವ್ಯವಸ್ಥೆಗಳತ್ತ ಜನರು ಮುಖ ಮಾಡುತ್ತಿದ್ದಾರೆ. ಅದರಲ್ಲೂ ಚಿಮಣಿ ಎಣ್ಣೆ ಬಳಸಿ ಕಾರ್ಯನಿರ್ವಹಿಸುವ ಸ್ಟೋವ್‌ಗಳಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ.

LPG ಸಿಲಿಂಡರ್‌ಗಳ ಕೆಲವೆಡೆ ಸರಬರಾಜಿನ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ, ಕಡಿಮೆ ವೆಚ್ಚದಲ್ಲಿ ಬಳಸಬಹುದಾದ ಚಿಮಣಿ ಎಣ್ಣೆ ಸ್ಟೋವ್‌ಗಳತ್ತ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ತಿರುಗುತ್ತಿದ್ದಾರೆ. ಹಳೆಯ ಮಾದರಿಯ ಈ ಸ್ಟೋವ್‌ಗಳು ಮತ್ತೆ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆಯುತ್ತಿರುವುದು ಗಮನಾರ್ಹವಾಗಿದೆ.

ಸ್ಥಳೀಯ ವ್ಯಾಪಾರಿಗಳ ಪ್ರಕಾರ, ಕಳೆದ ಕೆಲವು ದಿನಗಳಿಂದ ಚಿಮಣಿ ಎಣ್ಣೆ ಸ್ಟೋವ್‌ಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎನ್ನುತ್ತಾರೆ.

ತಜ್ಞರ ಅಭಿಪ್ರಾಯದಂತೆ, ಜಾಗತಿಕ ವಲಯದಲ್ಲಿನ ಅಶಾಂತಿ ಮತ್ತು ಇಂಧನ ಸಂಬಂಧಿತ ಅನಿಶ್ಚಿತತೆ ಹೀಗೆಯೇ ಮುಂದುವರಿದರೆ, ಪರ್ಯಾಯ ಇಂಧನ ಬಳಕೆಯ ಸಾಧನಗಳ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಒಟ್ಟಾರೆ ಬದುಕಿನ ಪಾಠ ಹೇಳಿ ಹೋದ ಕೊವಿಡ್ ನಂತೆ, ಮಧ್ಯಪ್ರಾಚ್ಯ ಬಿಕ್ಕಟ್ಟು ಸಹ ಹೊಸ ತಂತ್ರಜ್ಞಾನ ಬಂತೆಂದು ಹಳೆಯದನ್ನು ಮರೆಯ ಬೇಡ ಎಂಬ ಪಾಠ ಹೇಳಿಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.