Karwar| ಮಾನವ ಹಕ್ಕು ಆಯೋಗದ ಹೆಸರು ದುರ್ಬಳಕೆಯಾಗುತ್ತಿದೆ ಎಂದು ರಾಜ್ಯ ಮಾನವ ಹಕ್ಕು‌ ಆಯೋಗದ‌ ಅಧ್ಯಕ್ಷ ಟಿ.ಶ್ಯಾಮ್‌ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಜಿಲ್ಲಾಪಂಚಾಯಿತಿ ಸಭಾಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆಲ ಸಂಘಟನೆಗಳು ಮಾನವ ಹಕ್ಕು ಆಯೋಗದ ಹೋಲಿಕೆಯ ಹೆಸರುಗಳನ್ನು ಇಟ್ಟುಕೊಂಡು‌, ತಮ್ಮ ಖಾಸಗಿ ವಾಹನಗಳಿಗೂ ಅದರ ಸ್ಟಿಕರ್, ಲೋಗೋವನ್ನು ಅಂಟಿಸಿಕೊಂಡು ಓಡಾಡುತ್ತಿದ್ದಾರೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವ ಸಾಧ್ಯತೆ ಇದೆ‌ ಎಂದು ಆತಂಕ ವ್ಯಕ್ತಪಡಿಸಿದರು.ಇಂಥ ಹೋಲಿಕೆಯ ಹೆಸರುಗಳನ್ನಿಟ್ಟುಕೊಂಡು ಸಮಾಜಘಾತುಕ ಕೆಲಸ ಮಾಡುತ್ತಿರುವ ಸಂಘಟನೆಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹಾಗೂ ಪೋಲಿಸರಿಗೆ ದೂರು ಸಲ್ಲಿಸುವಂತೆ ಮನವಿ ಮಾಡಿದರು.

ಪ್ರತಿಯೊಬ್ಬ ಪ್ರಜೆಯ ಮಾನವ ಹಕ್ಕುಗಳನ್ನು ರಕ್ಷಿಸುವುದು ರಾಜ್ಯದ ಮತ್ತು ಇದರ ಎಲ್ಲಾ ಸಂಸ್ಥೆಗಳ ಆದ್ಯ ಕರ್ತವ್ಯ. ರಾಜ್ಯದ ಯಾವುದೇ ಕಛೇರಿ,ಸಂಸ್ಥೆಯಿಂದ ಯಾವುದೇ ರೀತಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಅಥವಾ ಮಾನವ ಹಕ್ಕುಗಳ ರಕ್ಷಣೆ ಮಾಡಲು ವಿಫಲವಾಗಿರುವ ಸಂದರ್ಭಗಳಲ್ಲಿ ತೊಂದರೆಗೆ ಒಳಗಾದವರು ತಮ್ಮ ಕುಂದು ಕೊರತೆಗಳನ್ನು ಪರಿಹರಿಸಲು, ನ್ಯಾಯ ದೊರಕಿಸಿಕೊಳ್ಳಲು ಮಾನವ ಹಕ್ಕುಗಳ ಆಯೋಗವನ್ನು ಸಂಪರ್ಕಿಸಬಹುದು ಎಂದರು.

ಈ ಸಂದರ್ಭದಲ್ಲಿ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ, ಜಿ.ಪಂ ಸಿಇಒ ಡಾ.ದಿಲೀಷ್ ಸಸಿ, ಎಸ್ಪಿ ದೀಪನ್ ಎಂ.ಎನ್ ಇದ್ದರು.