Karwar| ಮನುಷ್ಯನ ಅಭ್ಯುದಯ ಹಾಗೂ ಲೋಕಕಲ್ಯಾಣಕ್ಕೆ ಭಗವಂತನ ಆರಾಧನೆ ಅತ್ಯಂತ ಅವಶ್ಯಕ ಎಂದು ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ವಿಧುಶೇಖರ ಭಾರತೀ ಸ್ವಾಮೀಜಿ ನುಡಿದರು.

ಅವರು ಶೇಜವಾಡದ ಪುರಾಣ ಪ್ರಸಿದ್ಧ ಮಹತೋಭಾರ ಶೆಜ್ಜೇಶ್ವರ ನೂತನ ಶಿಲಾಮಯ ದೇವಾಲಯದ ಪುನರ್ನಿರ್ಮಾಣ ಕಾರ್ಯಕ್ಕೆ ತಮ್ಮ ಅಮೃತ ಹಸ್ತದಿಂದ ದೇವಾಲಯದ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮವನ್ನು ಅತ್ಯಂತ ವೈಭವಪೂರ್ಣವಾಗಿ ನೆರವೇರಿಸಿ ನಂತರ ಆಶಿರ್ವಚನ ನೀಡಿ, ಮನುಷ್ಯನ ಅಭ್ಯುದಯ ಹಾಗೂ ಲೋಕಕಲ್ಯಾಣಕ್ಕೆ ಭಗವಂತನ ಆರಾಧನೆ ಅತ್ಯಂತ ಅವಶ್ಯಕ. ಹೊಸದಾಗಿ ಬೃಹತ್ ಮಂದಿರಗಳನ್ನು ನಿರ್ಮಿಸುವುದಕ್ಕಿಂತಲೂ, ಪುರಾತನ ಕಾಲದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾಗುವುದು ಹೆಚ್ಚು ಶ್ರೇಯಸ್ಕರ. ನಮ್ಮ ಪೂರ್ವಜರು ತಪಸ್ಸು ಮಾಡಿ ಪೂಜಿಸಿಕೊಂಡು ಬಂದ ಇಂತಹ ಪುಣ್ಯಕ್ಷೇತ್ರಗಳಲ್ಲಿ ದೈವ ಸಾನ್ನಿಧ್ಯ ವಿಶೇಷವಾಗಿರುತ್ತದೆ. ಸನಾತನ ಧರ್ಮದ ಸಾರವು ಭಗವಂತನ ಆರಾಧನೆ ಮತ್ತು ಪರೋಪಕಾರದ ಜೀವನದಲ್ಲಿ ಅಡಗಿದೆ ಎಂದು ನುಡಿದರು.
ಗೋಕರ್ಣದ ತಂತ್ರಿಗಳಾದ ಗಜಾನನ ಭಟ್ಟ ಹಿರೇ ಮತ್ತು ಗಣಪತಿ ಭಟ್ಟ ಹಿರೇ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆಯಿಂದಲೇ ಗಣಪತಿ ಹೋಮ, ಬ್ರಹ್ಮ ಕೂರ್ಚ ಹೋಮ ಹಾಗೂ ದೇವರಿಗೆ ವಿಶೇಷ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯಿತು. ಬಳಿಕ11:50ರ ಸುಮುಹೂರ್ತದಲ್ಲಿ ಜಗದ್ಗುರುಗಳು ಶಿಲಾನ್ಯಾಸ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಾಸಕ ಸತೀಶ ಸೈಲ್ ಅವರು ಮಾತನಾಡಿ, ಪಂಚ ಲಿಂಗ ಕ್ಷೇತ್ರಗಳಲ್ಲಿ ಒಂದಾದ ಶೆಜ್ಜೇಶ್ವರ ದೇವಾಲಯದ ಅಭಿವೃದ್ಧಿಗೆ ಈಗಾಗಲೇ ಶಾಸಕರ ನಿಧಿಯಿಂದ 16 ಕೋಟಿ ರೂ. ಮಂಜೂರು ಮಾಡಲಾಗಿದೆ. ಹೆಚ್ಚುವರಿಯಾಗಿ 5 ಕೋಟಿ ರೂ. ಅನುದಾನ ಪಡೆಯಲು ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಈ ಐತಿಹಾಸಿಕ ಕ್ಷಣಕ್ಕೆ ಮಾಜಿ ಶಾಸಕಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ದೇವಾಲಯ ಜೀರ್ಣೋದ್ಧಾರ ಸಮಿತಿ ಮತ್ತು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು, ಸದಸ್ಯರು, ಅರ್ಚಕ ವೃಂದ ಹಾಗೂ ನೂರಾರು ಸಂಖ್ಯೆಯ ಭಕ್ತಾದಿಗಳು ಸಾಕ್ಷಿಯಾದರು.
