Sirsi| ಜಿಲ್ಲೆಯ ಸಾಂಸ್ಕೃತಿಕ ರಾಯಬಾರಿಯಾಗಿದ್ದ ಮಿಮಿಕ್ರಿ ಮಂಜು ಎಂದೇ ಹೆಸರುವಾಸಿಯಾಗಿದ್ದ ಶಿರಸಿಯ ಮಂಜುನಾಥ ಜಯರಾಮ ಶೆಟ್ಟಿ (62) ಮಂಗಳವಾರ ಜೂ.23 ರಂದು ನಿಧನರಾದರು.
ಶಿರಸಿಯ ರಾಮನಬೈಲ್ ನಿವಾಸಿಯಾಗಿದ್ದ ಮಿಮಿಕ್ರಿ ಮಂಜು ಪತ್ನಿ, ಓರ್ವ ಪುತ್ರಿ ಹಾಗು ಬಂಧು ಬಾಂದವರನ್ನು ಮತ್ತು ತಮ್ಮನ್ನು ಪ್ರೀತಿಸುತ್ತಿದ್ದ ಅಭಿಮಾನಿ ಬಳಗದವರನ್ನು ಅಗಲಿದ್ದಾರೆ. ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗೆಂದು ಹಲವಾರು ಆಸ್ಪತ್ರೆಗಳಿಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ರಾತ್ರಿ ನಿಧನ ಹೊಂದಿದರು.
ಬನವಾಸಿಯ ಕಂದಬೋತ್ಸವ, ಕರಾವಳಿ ಉತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಸಾಂಸ್ಕೃತಿಕ ರಾಯಬಾರಿಯಾಗಿ ಕೆಲಸ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಉತ್ತಮ ಮಿಮಿಕ್ರಿಯೆ ಕಲಾವಿದನಾಗಿ ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿಯೂ ತಮ್ಮ ಕಲೆಯ ಚಾಪು ಮೂಡಿಸಿದ್ದರು. ಈ ಮೂಲಕ ಮಿಮಿಕ್ರಿ ಮಂಜು ಎಂದೇ ಹೆಸರು ಮಾಡಿದ್ದರು. ಯಾವುದೇ ಕಾರ್ಯಕ್ರಮ ಇರಲಿ ಅಲ್ಲೊಂದು ಮಂಜುರವರ ನಿರ್ವಹಣೆ ಇರುತ್ತಿತ್ತು. ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮದಲ್ಲಿ ಇವರು ನಿರ್ವಹಣೆ ಮಾಡಿದ್ದಾರೆ. ಇವರ ಸಾಧನಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭ್ಯವಾಗಿದೆ. ಇವರು ಹಲವು ವರ್ಷ ಶಿರಸಿ ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದಾಗಿದೆ.
ಮೃತರ ಅಂತ್ಯಕ್ರಿಯೆಯು ಶಿರಸಿಯ ನೆಮ್ಮದಿ ರುದ್ರಭೂಮಿಯಲ್ಲಿ ನಾಳೆ ಬೆಳಿಗ್ಗೆ ಸುಮಾರು 8 ಗಂಟೆಗೆ ನಡೆಯಲಿದೆ ಎಂದು ಕಟುಂಬ ಮೂಲದವರು ತಿಳಿಸಿದ್ದಾರೆ.
ಸಂತಾಪ: ಮಿಮಿಕ್ರಿ ಮಂಜು ಶೆಟ್ಟಿ ನಿಧನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿ ಮೃತರು ಕಲೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ.
