Karwar| ಮಹಿಳಾ ಮಸೂದೆ ತಿದ್ದುಪಡಿಗೆ ವಿರೋಧಿಸಿದ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಇಡೀ ದೇಶದಲ್ಲಿ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಭವಿಷ್ಯ ನುಡಿದಿದ್ದಾರೆ.
ಕಾರವಾರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳೆಯರ ಪಾಲಿಗೆ ಐತಿಹಾಸಿಕ ದಿನವಾಗಬೇಕಿದ್ದ ಕ್ಷಣವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ದುರಂತ ದಿನವನ್ನಾಗಿ ಮಾರ್ಪಡಿಸಿವೆ. ಮಹಿಳೆಯರ ದಶಕಗಳ ಕನಸಾದ ‘ನಾರಿ ಶಕ್ತಿ ವಂದನ ಅಧಿನಿಯಮ’ಕ್ಕೆ ವಿರೋಧ ಪಕ್ಷಗಳು ಅಡ್ಡಗಾಲು ಹಾಕುವ ಮೂಲಕ ಮಹಿಳಾ ವಿರೋಧಿ ನಿಲುವನ್ನು ಜಗತ್ತಿನ ಮುಂದೆ ಪ್ರದರ್ಶಿಸಿವೆ ಎಂದು ಹರಿಹಾಯ್ದರು.
ಮಹಿಳಾ ಮೀಸಲಾತಿ ಮಸೂದೆಗೆ ಅಡ್ಡಗಾಲು ಹಾಕಿದ ಕಾಂಗ್ರೆಸ್ ಹಾಗೂ ‘ಇಂಡಿ’ ಮೈತ್ರಿಕೂಟವನ್ನು ಈ ನೆಲದ ಮಹಿಳೆಯರು ಎಂದಿಗೂ ಕ್ಷಮಿಸರು. ದೇಶದ 70 ಕೋಟಿ ಮಹಿಳೆಯರ ಶೇ. 33 ಮೀಸಲಾತಿಯ ಹಕ್ಕನ್ನು ದಶಕಗಳ ಕಾಲ ಕಸಿದುಕೊಂಡವರನ್ನು ಇತಿಹಾಸ ಎಂದಿಗೂ ಕ್ಷಮಿಸದು.
ಸೆಪ್ಟೆಂಬರ್ 18 ರಿಂದ 20 ರವರೆಗೆ ಇಡೀ ದೇಶದ ನಾರಿಯರು ಸಂಭ್ರಮಿಸಬೇಕಾದ ಸುಸಂದರ್ಭವಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸಚಿವ ಸಂಪುಟವು ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ತೀರ್ಮಾನ ಕೈಗೊಂಡು ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ, ಕೇವಲ ಐದೇ ನಿಮಿಷಗಳಲ್ಲಿ ಮಹಿಳೆಯರ ಕನಸನ್ನು ವಿರೋಧ ಪಕ್ಷಗಳು ನುಚ್ಚುನೂರು ಮಾಡಿವೆ. ಮಹಿಳೆಯರು ಇಂದು ಕೇವಲ ಮತದಾನಕ್ಕೆ ಮಾತ್ರ ಸೀಮಿತರಾಗಿಲ್ಲ. ರಾಜಕೀಯ, ಶಿಕ್ಷಣ, ರಕ್ಷಣೆ, ವಿಜ್ಞಾನ ಹಾಗೂ ಕಾರ್ಪೊರೇಟ್ ವಲಯದ ಉನ್ನತ ಹುದ್ದೆಗಳಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸುತ್ತಿದ್ದಾರೆ. ಇಂತಹ ಸಾಧಕ ಮಹಿಳೆಯರಿಗೆ ರಾಜಕೀಯವಾಗಿ ನ್ಯಾಯಬದ್ಧ ಪ್ರಾತಿನಿಧ್ಯ ಸಿಗುವುದನ್ನು ಕಾಂಗ್ರೆಸ್ ನಾಯಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು.
ಮಹಿಳಾ ಮೀಸಲಾತಿ ವಿಧೇಯಕ ಜಾರಿಯಾದರೆ ಅದರ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ ಎಂಬ ಕ್ಷುಲ್ಲಕ ರಾಜಕೀಯ ದ್ವೇಷದಿಂದ ಕಾಂಗ್ರೆಸ್ ಈ ವಿಧೇಯಕಕ್ಕೆ ಬೆಂಬಲ ನೀಡದೆ ದ್ರೋಹ ಬಗೆದಿದೆ. ಕ್ರೆಡಿಟ್ ಬೇಕಿದ್ದರೆ ನೀವೇ ತೆಗೆದುಕೊಳ್ಳಿ, ನಿಮ್ಮದೇ ಪೋಸ್ಟರ್ ಹಾಕಿಕೊಳ್ಳಿ ಎಂದು ಪ್ರಧಾನಿಯವರು ಉದಾರವಾಗಿ ಹೇಳಿದ್ದರೂ ಸಹ, ವಿರೋಧ ಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಮಹಿಳೆಯರ ಹಿತಾಸಕ್ತಿಯನ್ನು ಬಲಿ ಕೊಟ್ಟಿವೆ. ಇದು ಭಾರತೀಯ ಜನತಾ ಪಕ್ಷಕ್ಕೆ ಉಂಟಾದ ಹಿನ್ನಡೆಯಲ್ಲ, ಬದಲಾಗಿ ದೇಶದ ಸಮಸ್ತ ಮಹಿಳಾ ಕುಲಕ್ಕೆ ವಿರೋಧ ಪಕ್ಷಗಳು ಮಾಡಿದ ಮಹಾದ್ರೋಹವಾಗಿದೆ ಎಂದು ಕಿಡಿ ಕಾರಿದರು.
ಮಹಿಳೆಯರ ಅಭಿವೃದ್ಧಿಯನ್ನು ಸಹಿಸದ ವಿರೋಧ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ದೇಶದ ನಾರಿಯರು ತಕ್ಕ ಪಾಠ ಕಲಿಸಲಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗುವವರೆಗೂ ಮತ್ತು ಮಹಿಳೆಯರಿಗೆ ಸಿಗಬೇಕಾದ ನ್ಯಾಯಯುತ ಸ್ಥಾನಮಾನ ದೊರೆಯುವವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಯನಾ ನಿಲಾವರ್, ಸುಜಾತಾ ಬಾಂದೇಕರ್, ಮಾಲಾ ಹುಲಸ್ವಾರ್, ವೈಶಾಲಿ ತಾಂಡೇಲ್, ಕಲ್ಪನಾ ನಾಯ್ಕ, ರೇಷ್ಮಾ ಮಾಳ್ಸೇಕರ್, ಸಂಜಯ ಸಾಳುಂಕೆ ಸೇರಿದಂತೆ ಹಲವರು ಇದ್ದರು.
