Hubli| ಬಹು ನಿರೀಕ್ಷಿತ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗದ ಕಾಮಗಾರಿಗೆ ಶೀಘ್ರದಲ್ಲಿಯೇ ಅನುಮೋದನೆ ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದಿನಿಂದ ಆರಂಭವಾದ ‘TiECON 2026’ ಉದ್ಯಮಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಜೋಶಿ, ಈ ರೈಲು ಮಾರ್ಗ ಕರಾವಳಿಯ ಬಂದರುಗಳಿಗೆ ಸಂಪರ್ಕದ ಕೊಂಡಿಯಾಗಲಿದೆ.
ಉತ್ತರ ಕರ್ನಾಟಕ ಭಾಗದ ಕೈಗಾರಿಕೋದ್ಯಮಿಗಳಿಗೆ ಬಹಳಷ್ಟು ಸಹಕಾರವಾಗಲಿದೆ. ಅಭಿವೃದ್ಧಿಗೆ ಅನುಕೂಲವಾಗಲಿದೆ ಎಂದರು.
ಇನ್ನು ರೈಲ್ವೆ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸೂಕ್ತ ಸ್ಪಂಧನೆ ಇಲ್ಲ ಎಂದು ಆರೋಪಿಸಿದ ಅವರು, ಧಾರವಾಡ – ಬೆಳಗಾವಿ ಮಧ್ಯೆ ರೈಲ್ವೆ ಮಾರ್ಗದ ಯೋಜನೆ ಕಾಮಗಾರಿಗೆ ರಾಜ್ಯ ಸರ್ಕಾರ ಭೂಸ್ವಾಧೀನಕ್ಕೆ ಸಹಕಾರ ನೀಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಟೈ ಹುಬ್ಬಳ್ಳಿ ಪದಾಧಿಕಾರಿಗಳು ಈ ರೈಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.

ದೇಶದಲ್ಲಿ ವಾಣಿಜ್ಯೋದ್ಯಮಿಗಳಿಗೆ ಕೌಶಲ್ಯ ಬಹಳ ಅವಶ್ಯಕ. ದೇಶದ ಎಲ್ಲ ಕ್ಷೇತ್ರದಲ್ಲಿ ಅವಕಾಶಗಳು ತೆರೆದು ಕೊಂಡಿವೆ. ಕೃತಕ್ ಬುದ್ಧಿ ಮತ್ತೆ(AI), ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರ ಬೆಳೆದಿವೆ. ದೇಶದಲ್ಲಿ ಮುಂದಿನ ಐದು ವರ್ಷದಲ್ಲಿ ಕೋಟ್ಯಾಂತರ ಉದ್ಯೋಗ ಸೃಷ್ಟಿಯಾಗಲಿವೆ. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂದು ತಿಳಿಸಿದರು.
ದೇಶದಲ್ಲಿ ಸುಮಾರು 300 ಕ್ಕೂ ಹೆಚ್ಚು ಮೊಬೈಲ್ ತಯಾರಿಕಾ ಕಂಪನಿಗಳಿದ್ದು, ಇಡೀ ವಿಶ್ವಕ್ಕೆ ಶೇ.30 ರಷ್ಟು ಮೊಬೈಲ್‌ಗಳನ್ನು ಇಲ್ಲಿಂದಲೇ ರಫ್ತು ಮಾಡಲಾಗುತ್ತಿದೆ.
ಪ್ರಧಾನಿ ಮೋದಿ ಅವರ ‘ಸ್ಟಾರ್ಟ್-ಅಪ್ ಇಂಡಿಯಾ’ ಕನಸಿಗೆ ನಮ್ಮ ಉತ್ತರ ಕರ್ನಾಟಕ ಬಲ ತುಂಬುತ್ತಿದೆ. ಈ ಸಮಾವೇಶವು ಉತ್ತರ ಕರ್ನಾಟಕದ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಗೆ ಹೊಸ ವೇಗ ಮತ್ತು ದಿಕ್ಸೂಚಿ ನೀಡಲಿದೆ. ನಮ್ಮ ಭಾಗದ ಯುವ ಪ್ರತಿಭೆಗಳು ಮತ್ತು ಉದ್ಯಮಿಗಳಿಗೆ ಜಾಗತಿಕ ಮಟ್ಟದ ನೆಟ್‌ವರ್ಕಿಂಗ್ ಹಾಗೂ ತಜ್ಞರ ಮಾರ್ಗದರ್ಶನ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.
“North Karnataka Rising” ಧ್ಯೇಯದೊಂದಿಗೆ ನಡೆಯುತ್ತಿರುವ ಈ ಸಮಾವೇಶವು ನಮ್ಮ ಭಾಗದ ಸ್ಟಾರ್ಟ್‌ಅಪ್‌ಗಳಿಗೆ ಶಕ್ತಿ ತುಂಬಲಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಕೆಬಿಎಸ್ ಡೆವಲಪರ್ಸ್ ಎಂಡಿ ಅಮೃತ್ ಕಬಾಡೆ, ಸ್ವರ್ಣ ಗ್ರೂಪ್ ಎಂಡಿ ಸಿಹೆಚ್ ವಿ ಎಸ್ ವಿ ಪ್ರಸಾದ್, ಟಿಐಇ ಹುಬ್ಬಳ್ಳಿಯ ಅಧ್ಯಕ್ಷ ಗಿರೀಶ್ ಮಾನೆ, TiECON ಸಂಚಾಲಕ ವಿಶಾಲ್ ನಾಡಗೌಡ ಸೇರಿದಂತೆ ಹಲವು ಉದ್ಯಮಿಗಳು, ಗಣ್ಯರು ಉಪಸ್ಥಿತರಿದ್ದರು.
