Karwar| ಇಲ್ಲಿನ ಕಡಲತೀರದಲ್ಲಿರುವ ‘ಅಜ್ವಿ ಓಶಿಯನ್’ ಹೋಟೆಲ್ ನವರು ಕಳೆದ ಸುಮಾರು ಎರಡು ವರ್ಷಗಳಿಂದ ಬಾಡಿಗೆ ನೀಡದೇ ಪ್ರವಾಸೋದ್ಯಮ ಇಲಾಖೆಗೆ ಸತಾಯಿಸುತ್ತಿದ್ದು, ಬಾಡಿಗೆ ನೀಡದಂತೆ ತಡೆಯುತ್ತಿರುವ ಆ ಕಾಣದ ‘ಕೈ’ ಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಇಲಾಖೆಯ ವತಿಯಿಂದ ಪ್ರತಿ ತಿಂಗಳ 28,301 ರೂ. ಬಾಡಿಗೆ ಆಧಾರದ ಮೇಲೆ ‘ಅಜ್ವಿ ಓಶಿಯನ್’ ಗೆ ಹಂಚಿಕೆ ಮಾಡಲಾಗಿತ್ತು. ಆದರೆ ಕಳೆದ ಸುಮಾರು ಎರಡು ವರ್ಷಗಳಿಂದ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಿ ಲಕ್ಷಾಂತರ ರೂಪಾಯಿ ಬಾಡಿಗೆ ಉಳಿಸಿಕೊಂಡು ಬಂದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಈ ಬಾಡಿಗೆ ಪಾವತಿಯ ಬಗ್ಗೆ ಪ್ರವಾಸೋದ್ಯಮ ಇಲಾಖೆ ಹಲವಾರು ಪತ್ರ ಬರೆದು ಎಚ್ಚರಿಸಿದರೂ ಕ್ಯಾರೆ ಎನ್ನದ ಅಜ್ವಿ ಓಶಿಯನ್ ಮಾಲಕರ ವರ್ತನೆಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಕಂಗಾಲಾಗಿದ್ದಾರೆ.
ಕಳೆದ ಏಪ್ರಿಲ್ 2024 ರಿಂದ ಜನವರಿ-2026ರ ವರೆಗೆ ₹ 6,84,884 ಹಣ ಬಾಡಿಗೆ ಪಾವತಿಸಿ ಎಂದು ಇಲಾಖೆಯಿಂದ ನೋಟಿಸ್ ನೀಡಲಾಗಿದೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಕಾರಣ ನೀಡಿ ಹೋಟೆಲ್ ಮಾಲಕರು ಬಾಡಿಗೆ ಪಾವತಿಸಲು ನಿರಾಕರಿಸಿದ್ದಾರೆ.
ಈ ಬಗ್ಗೆ ಇಲಾಖೆಯಿಂದ ಮತ್ತೊಂದು ಪತ್ರ ಬರೆದು, ನ್ಯಾಯಾಲಯದಲ್ಲಿನ ಪ್ರಕರಣ ಮುಗಿಯುವವರೆಗೆ ಬಾಡಿಗೆ ಪಾವತಿಸುವುದಿಲ್ಲವೆಂದು ತಿಳಿಸಿರುವುದು ಸರಿಯಲ್ಲ.
ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ರೆಸ್ಟೋರೆಂಟನ್ನು ಮುಚ್ಚಿಲ್ಲ. ಆದಾಯ ಮಾಡಿಕೊಳ್ಖುತ್ತಿದ್ದೀರಿ. ಸರ್ಕಾರದ ಜಾಗವನ್ನು ಬಳಸಿ ಸಂಪಾದನೆ ಮಾಡಿಕೊಳ್ಳುತ್ತಿರುವ ನೀವು ಬಾಡಿಗೆ ಪಾವತಿಸದಿರುವುದು ಸರ್ಕಾರಕ್ಕೆ ಮೋಸ ಮಾಡಿದಂತಾಗುತ್ತಿದೆ. ಕಟ್ಟಡ ತೆರವುಗೊಳಿಸುವುದು, ಬಿಡುವುದು ನ್ಯಾಯಾಲಯದ ಆದೇಶದಂತಾಗಲಿ,
ಆದರೆ ತಾವು ಬಳಸುತ್ತಿರುವ ಹಾಲಿ ಕಾರ್ಯನಿರ್ವಹಿಸುತ್ತಿರುವ ರೆಸ್ಟೋರೆಂಟಿನ ಬಾಡಿಗೆಯನ್ನು ಕಡ್ಡಾಯವಾಗಿ ಪಾವತಿಸಬೇಕು. ಇಲ್ಲವಾದಲ್ಲಿ ತಮ್ಮನ್ನು ಕಪ್ಪುಪಟ್ಟಿಗೆ (Black List) ಸೇರಿಸುವ ಎಚ್ಚರಿಕೆ ನೀಡಿದ್ದಾರೆ. ಆದರೆ ಇದ್ಯಾವುದಕ್ಕೂ ಬಗ್ಗದೇ ಜಗ್ಗದೇ ‘ರಾಕ್’ ನಂತೆ ಹೊಟೆಲ್ ಮಾಲಕರು ಗಟ್ಟಿಯಾಗಿ ಕುಳಿತಿದ್ದಾರೆ.
ಇನ್ನು ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಕಾರವಾರದ ಸಮುದ್ರ ತೀರ, ಕಾಳಿ ನದಿ ತೀರಗಳನ್ನು ಖಾಸಗಿಯವರಿಗೆ ಬೇಕಾಬಿಟ್ಟಿ ಹಂಚಿಕೆ ಮಾಡಿರುವ ಅಧಿಕಾರಿಗಳ ವರ್ತನೆ ಈಗಾಗಲೇ ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಈ ಹೋಟೆಲ್ ಗಳಲ್ಲಿ ಮದುವೆ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಲಕ್ಷಾಂತರ ರೂ ಬಾಡಿಗೆ ಪಡೆದು ಮಾಡಲಾಗುತ್ತಿದೆ. ಮದುವೆಯಂಥ ಕಾರ್ಯಕ್ರಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಏನಾದರೂ ಅವಘಡಗಳು ಸಂಭವಿಸಿದ್ದಲ್ಲಿ ಅದರ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆ ಅಥವಾ ಈ ಹೊಟೆಲ್ ನವರು ಹೊರುತ್ತಾರೆಯೇ ಎಂಬ ಬಗ್ಗೆ ಇಲಾಖೆಯಿಂದ ಸ್ಪಷ್ಟನೆ ನೀಡಬೇಕಿದೆ. ಪ್ರವಾಸೋದ್ಯಮಕ್ಕೂ ಈ ಮದುವೆಯಂಥ ಖಾಸಗಿ ಕಾರ್ಯಕ್ರಮಗಳಿಗೆ ಎನೂ ಸಂಬಂಧ? ಎಂಬುದು ಸದ್ಯ ಕಾರವಾರಿಗರ ಪ್ರಶ್ನೆ.
