Haliyal| ಪಟ್ಟಣದ ಅಮ್ಮೀಸ್ ಬೇಕರಿಯಲ್ಲಿ ಹಾಳಾಗಿರುವ ಹಾಗೂ ಬೂಸ್ಟ್ ಹಿಡಿದ ಕೇಕ್ ಮಾರಾಟ ಮಾಡಿದ ಘಟನೆ ಬೆಳಕಿಗೆ ಬಂದಿದ್ದು, ಜನರಿಂದ ಆಕ್ರೋಶ ವ್ಯಕ್ತವಾಗಿದೆ.
ಮದುವೆ ಸಮಾರಂಭಕ್ಕೆ ಕೇಕ್ ಖರೀದಿಸಿದ್ದ ಸ್ಥಳೀಯ ಯುವಕರು, ಸಮಾರಂಭದಲ್ಲಿ ಕೇಕ್ ಕತ್ತರಿಸುವ ವೇಳೆ ಅದು ಹಾಳಾಗಿರುವುದು ಕಂಡುಬಂದಿತ್ತು. ಇದರಿಂದ ಯುವಕರು ಬೇಕರಿಗೆ ತೆರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಡೋಗಾ ಗ್ರಾಮದ ಯುವಕರು ಮದುವೆ ಸಮಾರಂಭಕ್ಕಾಗಿ ಅಮ್ಮೀಸ್ ಬೇಕರಿಯಿಂದ ಕೆಕ್ ಖರೀದಿಸಿದ್ದರು. ಆದರೆ, ಸಮಾರಂಭದ ಮಧ್ಯದಲ್ಲೇ ಕೇಕ್‌ನ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿ, ಪರಿಶೀಲಿಸಿದಾಗ ಅದು ಹಾಳಾಗಿರುವುದು ತಿಳಿದುಬಂದಿದೆ. ಇದರಿಂದ ಅಸಮಾಧಾನಗೊಂಡ ಯುವಕರು ಬೇಕರಿಯ ಮುಂದೆ ಕೆಲವು ಕಾಲ ಆಕ್ರೋಶ ವ್ಯಕ್ತಪಡಿಸಿ, ಗ್ರಾಹಕರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೇ ಪುರಸಭೆ ಅಧಿಕಾರಿಗಳ ತಂಡ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಬೇಕರಿಯಲ್ಲಿ ಸಂಗ್ರಹವಾಗಿದ್ದ ಕೆಲವು ಕೇಕ್‌ಗಳು ಹಾಳಾಗಿರುವುದು ಹಾಗೂ ಬೂಸ್ಟ್ ಹಿಡಿದಿರುವುದು ಪತ್ತೆಯಾಗಿದೆ. ತಕ್ಷಣವೇ ಆ ಕೇಕ್‌ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು, ಅವುಗಳನ್ನು ಲ್ಯಾಬ್ ಪರೀಕ್ಷೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಪುರಸಭೆ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಹಾಳಾಗಿರುವ ಕೇಕ್‌ಗಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದ್ದರಿಂದ, ಆಹಾರ ಸುರಕ್ಷತಾ ಕಾಯ್ದೆಯ ನಿಯಮಗಳ ಉಲ್ಲಂಘನೆಯಡಿ ಬೇಕರಿಗೆ ರೂ.15 ಸಾವಿರ ದಂಡ ವಿಧಿಸಲಾಗಿದೆ. ಅಲ್ಲದೇ, ಪರೀಕ್ಷಾ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆಯೂ ಅಮ್ಮೀಸ್ ಬೇಕರಿಗೆ ಭೇಟಿ ನೀಡಿದ್ದ ಪುರಸಭೆ ತಂಡ, ಅದೇ ರೀತಿಯ ಹಾಳಾದ ಕೇಕ್‌ಗಳನ್ನು ಪತ್ತೆಹಚ್ಚಿತ್ತು. ಆ ಸಂದರ್ಭದಲ್ಲೇ ಬೇಕರಿಗೆ ದಂಡ ವಿಧಿಸಿತ್ತು. ಆದರೂ ಸೂಕ್ತ ಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ಬಾರದ ಹಿನ್ನೆಲೆಯಲ್ಲಿ, ಇದೀಗ ಮತ್ತೆ ಇದೇ ರೀತಿಯ ಘಟನೆ ಮರುಕಳಿಸಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಹುಟ್ಟಿಸಿದೆ.
