Dandeli| ಸಿಎಂ‌ ಸಿದ್ದರಾಮಯ್ಯ ಹಾಗೂ ನಾನು ಅಣ್ತಮ್ಮರಿದ್ದಂಗೆ. ನಮ್ಮ‌ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂದು ಶಾಸಕ ಅರ್.ವಿ.ದೇಶಪಾಂಡೆ ಹೇಳಿದ್ದಾರೆ.

ದಾಂಡೇಲಿಯಲ್ಲಿ ಡ್ರೈವಿಂಗ್ ಟೆಸ್ಟ್ ಟ್ರ್ಯಾಕ್ ಉದ್ಘಾಟನೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಸಹೋದರ ಇದ್ದ ಹಾಗೆ, ನಮ್ಮ ಸಂಬಂಧ ಚೆನ್ನಾಗಿದೆ ಎಂದು ಹೇಳಿದರು.

ಇನ್ನು‌ ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಉತ್ತರಿಸಿ, ನಾನಾಗಿ ಸಚಿವ ಸ್ಥಾನ ಕೇಳುವುದಿಲ್ಲ. ನಾನು ಎಂಟು ಜನ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ಅವರಿಗಿಂತ ವಯಸ್ಸಿನಲ್ಲಿ ಆರು ತಿಂಗಳು ಹಿರಿಯ ನಾನು. ನನ್ನ ಅವರ ಸಂಬಂಧ ಚೆನ್ನಾಗಿದೆ. ನಾನು ಕ್ಯಾಬಿನೆಟ್ ನಲ್ಲಿರಬೇಕೋ, ಬೇಡವೋ ಎಂದು ಪಕ್ಷ ನಿರ್ಧರಿಸುತ್ತದೆ. ನಾನ್ಯಾರ ಮುಂದೆಯು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ ಎಂದರು.

ಮುಖ್ಯಮಂತ್ರಿಗಳೂ ಸಹ ತಮ್ಮ ಇತಿಮಿತಿಯೊಳಗೆ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಎಲ್ಲಾ ಶಾಸಕರು,‌ ಎಂಎಲ್ ಸಿಗಳಿಗೆ ಮಂತ್ರಿ ಸ್ಥಾನ ಕೇಳುವ ಹಕ್ಕಿದೆ. ಕೇಳುವುದರಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನಿಸಿದರು.

ನೀರಿಗಾಗಿ ಪಾದಯಾತ್ರೆ ನಡೆಸುತ್ತಿರುವವರಿಗೆ ಟಾಂಗ್ ನೀಡಿದ ದೇಶಪಾಂಡೆ, ಕುಡಿಯುವ ನೀರಿನ ಯೋಜನೆಗಳು ಮುಕ್ತಾಯ ಹಂತದಲ್ಲಿವೆ. ಕಾಳಿ ನದಿಯಿಂದ 40 ಕೆರೆ ತುಂಬಿಸುವ ಯೋಜನೆ, ಬಾಂದಾರ ಯೋಜನೆ ಎರಡು ತಿಂಗಳಲ್ಲಿ ಪೂರ್ಣಗೊಂಡು ಉದ್ಘಾಟನೆಯಾಗಲಿವೆ. ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಶಾಸಕನಾದ ನನಗೆ ಗೊತ್ತಿದೆ. ಯೋಜನೆಗಳು ಮುಕ್ತಾಯ ಹಂತದಲ್ಲಿರುವಾಗ ನೀರಾವರಿಗಾಗಿ ಪಾದಯಾತ್ರೆ ಮಾಡಿದರೆ ಅದರ ಹಿಂದಿನ ಮರ್ಮ ಜನರಿಗೆ ಗೊತ್ತಾಗುತ್ತದೆ. ಇದರ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಸದ್ಯದಲ್ಲೇ ಯೋಜನೆ ಉದ್ಘಾಟನೆ ನಡೆಯಲಿದೆ ಎಂದರು.

ಪ್ಯಾರಿ ಕಬ್ಬು ಕಾರ್ಖಾನೆ ದೇಶದಲ್ಲಿ ಉತ್ತಮ ಬೆಲೆಯನ್ನು ಕಬ್ಬಿಗೆ ನೀಡಿದೆ. ರೈತರ ಕಬ್ಬಿಗೆ ಮಾರಾಟ ಮಾಡಿದ ವರ್ಷದಲ್ಲಿ ಹಣ ಪಾವತಿ ಮಾಡುತ್ತಿದೆ. ಇದು ರೈತರಿಗೂ ಗೊತ್ತು. ರಾಜಕೀಯ ಮಾಡುವವರಿಗೆ ಕೆಲ ಅಪೇಕ್ಷೇ ಇರುತ್ತವೆ ಎಂದು ತಿರುಗೇಟು ನೀಡಿದರು.

ದಾಂಡೇಲಿ ತಾಲೂಕಾಗಿದೆ.‌ ಅತೀ ಕಡಿಮೆ‌ ಮಜಿರೆ, ಜನಸಂಖ್ಯೆ ಇದ್ದರೂ ತಾಲೂಕು ಕೇಂದ್ರವಾಗಿದೆ. ಹಂತ ಹಂತವಾಗಿ ದಾಂಡೇಲಿ ತಾಲ್ಲೂಕಿನ ಅಭಿವೃದ್ದಿ ಕೆಲಸಗಳು ಆಗಲಿವೆ ಎಂದು ಶಾಸಕ ದೇಶಪಾಂಡೆ ಹೇಳಿದರು.