ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿಯ ವಿಠ್ಠಲ ರುಕುಮಾಯಿ ದೇವಸ್ಥಾನದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಸ್ಥಿತಿ ಗಂಭೀರವಾಗಿದೆ.
KA19 H D3868 ನೋಂದಣಿಯ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಅಪಘಾತಕ್ಕೀಡಾದ ಯುವಕರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಸ್ಥಳೀಯೋರ್ವರು ಚಿತ್ತಾಕುಲ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಸ್ಥಳಕ್ಕೆ ತೆರಳಿದ ಪಿಎಸ್ಐ ಪರಶುರಾಮ ಹಾಗೂ ಸಿಬ್ಬಂದಿ ಯುವಕರನ್ನು ಪೊಲೀಸ್ ವಾಹನದಲ್ಲೇ ಹಾಕಿಕೊಂಡು ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ, ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗೋವಾ ದಾಬೋಲಿಂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇಬ್ಬರು ಯುವಕರ ಹೆಸರು ಹಾಗೂ ವಿಳಾಸ ಇನ್ನೂ ಕೂಡಾ ಪತ್ತೆಯಾಗಬೇಕಿದ್ದು, ಪೊಲೀಸರು ಪತ್ತೆಗೆ ಮುಂದಾಗಿದ್ದಾರೆ.
ಅಲ್ಲದೇ, ಇಬ್ಬರು ಯುವಕರು ಮದ್ಯಪಾನ ಮಾಡಿದ್ದರು ಎಂಬ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಯುವಕರು ಅತೀ ವೇಗದಿಂದ ಚಲಾಯಿಸಿ ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಢಿಕ್ಕಿ ಹೊಡೆದಿದ್ದಾರೆಯೇ ಅಥವಾ ಯಾವುದಾದರೂ ವಾಹನ ಹಿಟ್ & ರನ್ ಮಾಡಿ ಪರಾರಿಯಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
