Karwar|Social Media|Fraud|         ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತು‌‌ ನಂಬಿ, ಲಿಂಕ್ ಗಳನ್ನು ಒತ್ತಿ ಹಣ ಕಳೆದುಕೊಳ್ಳಬೇಡಿ ಎಂದು ಸಾರ್ವಜನಿಕರಿಗೆ, ಪೋಲಿಸ್ ಇಲಾಖೆ ಪದೇ ಪದೇ ಮನವಿ ಮಾಡಿದರೂ ಸಹ ಇಲ್ಲೊಬ್ಬ ‘ಮಾಯಾವಿ’ ಗೆ‌‌ ನಂಬಿ ಬರೊಬ್ಬರಿ 12 ಲಕ್ಷ ಹಣ ಕಳೆದುಕೊಂಡ ಘಟನೆ ನಡೆದಿದೆ.

ಕಾರವಾರ ನಂದನಗದ್ದಾದ ಸಣ್ಣ ಮಸೀದಿ ಹತ್ತಿರದ ಜೈನಬ ತಂದೆ ಸುಲ್ತಾನ ಮುಲ್ಲಾ ಎಂಬುವವರೇ ಮೋಸ‌ ಹೋದವರು. ಇವರಿಗೆ ರುಕ್ಸಾನಾ ಖಾನ್ ಎಂಬ ಇನಸ್ಟಾಗ್ರಾಮ್ ಮೂಲಕ ಆನ್ ಲೈನ್ ಪಾರ್ಟ್ ಜಾಬ್ (Online part time Job) ಇರುವ ಬಗ್ಗೆ ಜಾಹಿರಾತು ಬಂದಿದೆ. ಅವರು ಈ ಜಾಹಿರಾತಿನ ಕೆಳಗಡೆ ಇರುವ ಲಿಂಕನ್ನು ಕ್ಲಿಕ್ ಮಾಡಿದಾಗ Task VIP ಎಂಬ ಹೆಸರಿನ ಟೆಲಿಗ್ರಾಮ್ ಗ್ರೂಪ್‌ ಗೆ ಸೇರ್ಪಡೆ ಆಗಿದ್ದಾರೆ.

ಈ ಗ್ರೂಪನ ಎಡ್ಮಿನ ಆಗಿದ್ದ ರುಕ್ಸಾನಾ ಖಾನ್ ಎಂಬ ಹೆಸರಿನ ಟೆಲಿಗ್ರಾಮ್ ಐ.ಡಿಯನ್ನು ಬಳಸುತ್ತಿರುವ ಮಹಿಳೆ ಜೈನಬಿ ಮುಲ್ಲಾಗೆ Online part time Job ಇದೆ. ಹಣ ಗಳಿಸೋ ಆಸೆ‌ ಇದೆಯಾ ಎಂದು ಕೇಳಿದ್ದಾಳೆ.

‘ಹುಂ’ ಎಂದ ಜೈನಬ, ಪಾರ್ಟ್ ಟೈಮ್ ನಲ್ಲಿ‌ ಲಕ್ಷ ಹಣ ಗಳಿಸುವ ಆಸೆಯಿಂದ ‘ಮಾಯಾವಿ’ ಯ ಜಾಲಕ್ಕೆ ಸಿಲುಕಿದ್ದಾನೆ
ಆಗ ರುಕ್ಸಾನಾ ಒಂದು ಲಿಂಕ್ ನ್ನು ಜೈನಬಿಗೆ ಕಳುಹಿಸಿಕೊಟ್ಟಿದ್ದಾಳೆ. ಈ ಲಿಂಕ್ ನ ಕ್ಲಿಕ್ ಮಾಡಿದಾಗ VIP ಎಂಬ ಹೆಸರಿನ ಒಂದು ವೆಬ್ ಸೈಟ್ ಓಪನ್ ಆಗಿದೆ.

ಅದರಲ್ಲಿ ಬೇರೆ ಬೇರೆ ಕಂಪನಿಯ ಪ್ರಾಡಕ್ಟ್ ಇದ್ದು, ಅದಕ್ಕೆ ರೇಟಿಂಗ ಹಾಗೂ ರಿವ್ಯೂ ಕೊಡುವಂತೆ ರುಕ್ಸಾನಾ ಹೇಳಿ, ತಾನು ನೀಡುವ ಟಾಸ್ಕ್ ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅತೀ ಹೆಚ್ಚಿನ ಲಾಭಾಂಶ ಪಡೆಯಬಹುದು ಅಂತಾ ತಿಳಿಸಿದ್ದಾಳೆ. ಅದಕ್ಕೆ ಒಪ್ಪಿ ಜೈನಬ ಮೊದಲಿಗೆ ಏಳು ನೂರು ಹೂಡಿಕೆ ಮಾಡಿ ಆಕೆಯ ಟಾಸ್ಕನ್ನು ಪೂರ್ಣಗೊಳಿಸಿದ್ದಾನೆ. ಈ ಟಾಸ್ಕ್ ಗೆ ಆಕೆಯಿಂದ 920 ಹಣ ಈತನಿಗೆ ಜಮಾ ಆಗಿದೆ.

ಈಗಾಗಲೇ ರುಕ್ಸಾನಾಳ ಟ್ರ್ಯಾಪ್ ನಲ್ಲಿ ನಿಧಾನವಾಗಿ ಸಿಲುಕಿದ್ದ ಜೈನಬಗೆ, ಹೀಗೆ ಇದೇ ರೀತಿಯಲ್ಲಿ ಹಣ ಹೂಡಿಕೆ ಮಾಡಿದರೇ ಲಕ್ಷಾಂತರ ಹಣ ಗಳಿಸಬಹುದು ಎಂದು ರುಕ್ಸಾನಾ ‘ಅಂಗೈಯಲ್ಲೇ ಅರಮನೆ’ ಕಾಣಿಸಿದ್ದಾಳೆ.

ಮಾಯಾವಿ ಮಾತಿಗೆ ಕ್ಲೀನ್ ಬೊಲ್ಡ್ ಆದ ಜೈನಬ ಮುಲ್ಲಾ, ಸುಲಭವಾಗಿ ಹಣ ಗಳಿಸುವ ಆಸೆಯಿಂದ ಆಕೆಯ ಬ್ಯಾಂಕ್ ಖಾತೆಗಳಿಗೆ ಜನೆವರಿ‌ 5 ರಿಂದ ಫೆ. 9 ರ ವರೆಗೆ ಒಟ್ಟು ಹಣ ರೂ 12.43ಲಕ್ಷ ಜಮಾ ಮಾಡಿ, ಲಕ್ಷ ಲಕ್ಷ‌ ಮರಳಿ ಪಡೆಯುವ ಕನಸು ಕಾಣುತ್ತಿದ್ದ.

ಆಗ ‘ಕೊಟ್ಟಂವ ಕೊಡಂಗಿ, ಇಸಕೊಂಡವಳು ರುಕ್ಸಾನಾ’ (ಈರಭದ್ರ) ಎಂಬಂತೆ ಆಕೆ ಮಾತ್ರ ಈತನ ಸಂಪರ್ಕಕ್ಕೂ ಸಿಗದೇ, ಈತ ಹೂಡಿಕೆ ಮಾಡಿದ ಹಣಕ್ಕೆ ಯಾವುದೇ ಲಾಭಾಂಶ ಅಥವಾ ಹೂಡಿದ ಹಣ ನೀಡದೇ ತನ್ನ ‘ಅಂಗಡಿ’. ಮುಚ್ಚಿ ಹೊಸ ‘ಬಕ್ರಾ’ ಹುಡುಕುತ್ತಾ ಹೊರಟಿದ್ದಾಳೆ.

ತಾನು ರುಕ್ಸಾನಾಳಿಂದ ‘ಬಲಿಕಾ ಬಕ್ರಾ’ ಆದೆ ಎಂದು ಕೊನೆಗೆ ತಿಳಿದ ಜೈನಬ, ಕಾರವಾರದ ಸೈಬರ್ ಅಪರಾಧ ಪೋಲಿಸ್ ಠಾಣೆಗೆ ಹೋಗಿ ದೂರು ನೀಡಿದ್ದಾನೆ. ಸೈಬರ್ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಅಮಾಯಕ ಜೈನಬನಿಗೆ ಲಕ್ಷಾಂತರ ಟೋಪಿ‌ ಹಾಕಿದ ರುಕ್ಸಾನಾ, ಬೇರೊಂದು ಹೆಸರಿನಿಂದ ನಿಮ್ಮ ಬಳಿ‌ ಬರಬಹುದು. ಸಾಮಾಜಿಕ ಜಾಲ ತಾಣಗಳನ್ನು ‌ಬಳಸುವಾಗ ಲಾಭದ ಆಸೆಗೆ ಮೋಸ ಹೋಗಬೇಡಿ ಎಂಬುದು www.news waveskannada.com ನ ಕಳಕಳಿ.