ಉತ್ತರಕನ್ನಡ ಜಿಲ್ಲೆಯ ಅಂಕೋಲಾ ನಗರ ಹಾಗೂ ಜೊಯಿಡಾದ ಉಳವಿಯಲ್ಲಿ ನಡೆದ ಜೂಜಾಟದಲ್ಲಿ ಪೊಲೀಸರು ಒಟ್ಟು 16 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
www.newswaveskannada.com ಈ ಬಗ್ಗೆ ವಿಶೇಷ ವರದಿ ಕೂಡಾ ಮಾಡಿತ್ತು, ಎಕ್ಕ, ರಾಜ, ರಾಣಿ ಅಂತಿದ್ದವರಿಗೆ ಇದೀಗ ತಲೆಬಿಸಿ ಪ್ರಾರಂಭವಾಗಿದೆ.
ಅಂಕೋಲಾ ನಗರದಲ್ಲಂತೂ ಯಾವುದೇ ಕಾರ್ಯಕ್ರಮ ನಡೆಯಲಿ ಜೂಜಾಟಗಳ ಅಡ್ಡೆಗಳು ಪ್ರತ್ಯಕ್ಷಗೊಳ್ಳುತ್ತಿದ್ದವು. ಇವುಗಳಂತೂ ಅಂಕೋಲಾದ ಕೆಲವು ಪ್ರಭಾವಿ ವ್ಯಕ್ತಿಗಳ ಆಶ್ರಯದಲ್ಲೇ ನಡೆಯುತ್ತಿತ್ತು.
ಈ ಬಗ್ಗೆ ಮೂಲಗಳಿಂದ ವಿಡಿಯೋ ಸಹಿತ ಮಾಹಿತಿ ಪಡೆದ ಉತ್ತರಕನ್ನಡ ಜಿಲ್ಲಾ ಎಸ್ಪಿ ದೀಪನ್ ಎಂ.ಎನ್. ಕೂಡಲೇ ಅಂಕೋಲಾ ಪೊಲೀಸರಿಗೆ ಖಡಕ್ ಆದೇಶ ನೀಡಿ ಕೂಡಲೇ ಸ್ಥಳಕ್ಕೆ ರೈಡ್ ಮಾಡಲು ಹೇಳಿದ್ದರು.
ಈ ಹಿನ್ನೆಲೆ ಲಕ್ಷ್ಮೇಶ್ವರದ ದೈವಜ್ಞ ಕಲ್ಯಾಣ ಮಂಟಪದ ಎದುರು ನಡೆಯುತ್ತಿದ್ದ ಕುಟ್ ಕುಟಿ ಜೂಜಿನ ಅಡ್ಡಕ್ಕೆ ಅಂಕೋಲಾ ಪೊಲೀಸರು ದಾಳಿ ಮಾಡಿ ಹಾಗೂ ವಿಡಿಯೋ ಆಧರಿಸಿ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಎಣ್ಣೆಮಡಿಯ ಶಂಕರ್, ಬೊಬ್ರುವಾಡದ ನವೀನ್ ರತ್ನಾಕರ್, ಹೊಸಕಟ್ಟಾದ ಈಶ್ವರ ಹರಿಕಂತ್ರ, ಕನಸಿಗದ್ದೆಯ ದೀಪಕ್ ನಾಯ್ಕ್, ಹಾರವಾಡದ ಸಂದೀಪ್ ನಾಯ್ಕ್, ಪೂಜಗೇರಿಯ ಸತೀಶ್ ಪುಟ್ಟು ವಿರುದ್ಧ ಪ್ರಕರಣ ದಾಖಲಾಗಿದೆ. ಇವರಿಂದ 2,360ರೂ. ನಗದು ಹಾಗೂ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಇನ್ನು ಮಾಹಿತಿ ಮೇರೆಗೆ ಜೊಯಿಡಾದ ಉಳವಿಯಲ್ಲಿ ಜಾತ್ರೆ ಸಂದರ್ಭದಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಆಟದ ಸ್ಥಳಕ್ಕೂ ದಾಳಿ ಮಾಡಿದ ಜೊಯಿಡಾ ಪೊಲೀಸರು ಎರಡು ಪ್ರತ್ಯೇಕ ಪ್ರಕರಣದಲ್ಲಿ 10 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮೊದಲ ಪ್ರಕರಣದಲ್ಲಿ ಬೆಳಗಾವಿ ಅನಗೋಳದ ನಿವಾಸಿಗಳಾದ ಬಸವರಾಜ, ಮಂಜುನಾಥ, ಚಂದ್ರಪ್ಪ, ಈರಪ್ಪ, ಮುದಕಪ್ಪ ವಿರುದ್ಧ ಪ್ರಕರಣ ದಾಖಲಾಗಿದ್ದು, 20,700ರೂ. ವಶಪಡಿಸಿಕೊಂಡಿದ್ದಾರೆ.
ಇನ್ನು ಎರಡನೇ ಪ್ರಕರಣದಲ್ಲಿ ಬೈಲಹೊಂಗಲದ ಶಿವಾನಂದ, ಮಹೇಶ್, ನಾಗರಾಜ, ಬಾಳಪ್ಪ, ಸವದತ್ತಿಯ ರಿಜ್ವಾನ್ ವಿರುದ್ಧ ಪ್ರಕರಣ ದಾಖಲಾಗಿದ್ದು, 3,720ರೂ. ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಈ ಕ್ರಮದಿಂದ ಉತ್ತರಕನ್ನಡ ಜಿಲ್ಲೆಯಲ್ಲಿ ಅಂದರ್ ಬಾಹರ್ ಹಾಗೂ ಕುಟ್ ಕುಟಿ ಅಡ್ಡೆಗಳನ್ನು ನಡೆಸುವವರಿಗೆ ಕೊಂಚ ಭೀತಿ ಉಂಟಾಗಿದೆ.
