ಕ್ರೂಸರ್ ವಾಹನ ಮತ್ತು ಮಾರುತಿ ಎರ್ಟಿಗಾ ನಡುವೆ ಮುಖಾಮುಖಿ ಢಿಕ್ಕಿ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ ಆರೇಳು ಜನರು ಗಾಯಗೊಂಡ ಘಟನೆ ಹಳಿಯಾಳ – ದಾಂಡೇಲಿ ರಾಜ್ಯ ಹೆದ್ದಾರಿಯ ಕೆಸರೊಳ್ಳಿಯ ಬಳಿ ಇಂದು ಸಂಜೆ ನಡೆದಿದೆ.
ಸವದತ್ತಿಯಿಂದ ಹುಲವಿಗೆ ಹೋಗುತ್ತಿದ್ದ ಕ್ರೂಸರ್ ವಾಹನ ಮತ್ತು ದಾಂಡೇಲಿಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಮಾರುತಿ ಎರ್ಟಿಗಾ ವಾಹನದ ನಡುವೆ ಅಪಘಾತ ನಡೆದಿದ್ದು, ಕ್ರೂಸರ್ ವಾಹನದಲ್ಲಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಲ್ಲದೇ, ಇದೇ ವಾಹನದಲ್ಲಿದ್ದ ಆರೇಳು ಜನರಿಗೆ ಗಾಯವಾಗಿದೆ.
ಘಟನಾ ಸ್ಥಳಕ್ಕೆ ಹಳಿಯಾಳದ ಪೊಲೀಸರು ದೌಡಾಯಿಸಿದ್ದು, ಗಾಯಗೊಂಡವರನ್ನು ಸ್ಥಳೀಯರ ಸಹಾಯದಿಂದ ಆ್ಯಂಬುಲೆನ್ಸ್ ವಾಹನದ ಮೂಲಕ ಹಳಿಯಾಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧಿಸಿ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
