ಶಿರಸಿ: ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಕೆಡಿಸಿಸಿ) ಆಡಳಿತ ಮಂಡಳಿಯ ಚುನಾವಣಾ ಕಣದ ಅಂತಿಮ ಚಿತ್ರಣ ಹೊರಬಿದ್ದಿದ್ದು, ಶಾಸಕ ಶಿವರಾಮ ಹೆಬ್ಬಾರ್ ಅವರ ಬಣ ಸ್ಪಷ್ಟ ಬಹುಮತದೊಂದಿಗೆ ಬ್ಯಾಂಕ್ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.
ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಬಾಕಿ ಉಳಿದಿದ್ದ ‘ಗ್ರಾಹಕರ ಮತ್ತು ಸಂಸ್ಕರಣಾ ಸಹಕಾರಿ ಸಂಘಗಳ’ ಕ್ಷೇತ್ರದ ಮತ ಎಣಿಕೆ ಶನಿವಾರ ಇಲ್ಲಿನ ಬ್ಯಾಂಕ್ ಮುಖ್ಯ ಕಚೇರಿಯಲ್ಲಿ ನಡೆಯಿತು. ತೀವ್ರ ಕುತೂಹಲ ಮೂಡಿಸಿದ್ದ ಈ ಕ್ಷೇತ್ರದಲ್ಲಿ ಹೆಬ್ಬಾರ್ ಬಣದ ನಿರಂಜನ ಭಟ್ ಅವರು 20 ಮತಗಳನ್ನು ಪಡೆದು ವಿಜಯಿಯಾದರೆ, ಅವರ ಪ್ರತಿಸ್ಪರ್ಧಿ ತಿಮ್ಮಯ್ಯ ಹೆಗಡೆ 14 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.
ಇದರೊಂದಿಗೆ ಒಟ್ಟು 16 ಚುನಾಯಿತ ನಿರ್ದೇಶಕ ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಶಿವರಾಮ ಹೆಬ್ಬಾರ್ ಬಣ 11 ಸ್ಥಾನಗಳಲ್ಲಿ ಹಾಗೂ ಸಚಿವ ಮಂಕಾಳ ವೈದ್ಯ ಅವರ ಬಣ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ.
ಮೂರು ತಿಂಗಳ ಬಳಿಕ ಫಲಿತಾಂಶ:
ಕಳೆದ ಅಕ್ಟೋಬರ್ 25 ರಂದೇ ಚುನಾವಣೆ ನಡೆದಿದ್ದರೂ, ವಿವಿಧ ಕ್ಷೇತ್ರಗಳ ಕುರಿತು ನ್ಯಾಯಾಲಯದಲ್ಲಿ ತಕರಾರು ಅರ್ಜಿಗಳಿದ್ದ ಕಾರಣ ಫಲಿತಾಂಶ ಘೋಷಣೆ ವಿಳಂಬವಾಗಿತ್ತು. ಧಾರವಾಡ ಹೈಕೋರ್ಟ್ ಪೀಠದ ಸೂಚನೆಯಂತೆ ಫೆಬ್ರವರಿ 7 ರಂದು ಅಂತಿಮ ಕ್ಷೇತ್ರದ ಎಣಿಕೆ ಕಾರ್ಯ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಾಯಕ ಆಯುಕ್ತ ಚಂದ್ರಶೇಖರ ಜಿ.ಆರ್. ಕಾರ್ಯನಿರ್ವಹಿಸಿದರು.
- ಹಾಲಿ ಅಧ್ಯಕ್ಷರೂ ಆಗಿರುವ ಶಿವರಾಮ ಹೆಬ್ಬಾರ್ ಅವರು ಮರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ನೂತನ ನಿರ್ದೇಶಕರ ಪಟ್ಟಿ
* ಶಿರಸಿ: ಎಮ್.ಎ.ಹೆಗಡೆ
* ಯಲ್ಲಾಪುರ: ಶಿವರಾಮ ಹೆಬ್ಬಾರ್
* ಸಿದ್ದಾಪುರ: ರಾಘವೇಂದ್ರ ಶಾಸ್ತ್ರಿ
* ಕುಮಟಾ: ರಾಜಗೋಪಾಲ ಅಡಿ
* ಭಟ್ಕಳ: ಮಂಕಾಳ ವೈದ್ಯ
* ಹೊನ್ನಾವರ: ವಿಶಾಲ್ ಭಟ್
* ಅಂಕೋಲಾ: ಬಾಬು ಸುಂಕೇರಿ
* ಕಾರವಾರ: ಪ್ರಕಾಶ ಗುನಗಿ
* ಹಳಿಯಾಳ: ಎಸ್.ಎಲ್.ಘೋಟೇಕರ್
* ಮುಂಡಗೋಡ: ಎಚ್.ಎಮ್.ನಾಯ್ಕ
* ಜೋಯಿಡಾ: ಕೃಷ್ಣ ದೇಸಾಯಿ
* ಗ್ರಾಹಕರ ಸಂಸ್ಕರಣ: ನಿರಂಜನ ಭಟ್
* ಮಾರ್ಕೆಟಿಂಗ್: ರವಿ ಹೆಗಡೆ
* ಸೌಹಾರ್ದ: ಮೋಹನ್ ನಾಯಕ್
