Karwar| ಮದುವೆ ಸಮಾರಂಭಗಳಲ್ಲಿ ಮದುಮಗನ ಮನೆಗೆ ಸಾಗುವ ದಿಬ್ಬಣ (ಬಾರಾತ್) ಕಾರ್ಯಕ್ರಮಗಳ ಫೋಟೊ ಹಾಗೂ ವಿಡಿಯೊ ಚಿತ್ರೀಕರಣವನ್ನು ಇನ್ನು ಮುಂದೆ ಮಾಡದಿರಲು ಕಾರವಾರ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮಹತ್ವದ ನಿರ್ಧಾರ ಕೈಗೊಂಡಿದೆ.

ಕಾರವಾರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಸೋಸಿಯೇಶನ್ ಸದಸ್ಯರು, ಮದುವೆ ದಿಬ್ಬಣ ಕಾರ್ಯಕ್ರಮಗಳು ತಡರಾತ್ರಿವರೆಗೂ ಮುಂದುವರಿಯುವುದರಿಂದ ಫೋಟೋಗ್ರಾಫರ್ ಗಳು ಸಮಯದ ಮಿತಿ ಇಲ್ಲದೆ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ತಡರಾತ್ರಿ ಕೆಲ ಕಡೆ ಫೋಟೋಗ್ರಾಫರ್‌ಗಳು ಹಾಗೂ ವಿಡಿಯೊಗ್ರಾಫರ್‌ಗಳೊಂದಿಗೆ ಅನುಚಿತ ವರ್ತನೆ ನಡೆದಿದೆ. ಕೆಲವು ಸಂದರ್ಭಗಳಲ್ಲಿ ಕ್ಯಾಮೆರಾಗಳನ್ನು ಕಸಿಯುವಂತಹ ಘಟನೆಗಳು ನಡೆದಿದ್ದು, ದಿಬ್ಬಣ ಕಾರ್ಯಕ್ರಮಗಳು ತಡರಾತ್ರಿವರೆಗೂ ಮುಂದುವರಿಯುವುದರಿಂದ ಸಮಯದ ಮಿತಿ ಇಲ್ಲದೆ ಕೆಲಸ ಮಾಡಬೇಕಾದ ಪರಿಸ್ಥಿತಿ ಫೋಟೋಗ್ರಾಫರ್ ಗಳಿಗೆ ನಿರ್ಮಾಣವಾಗುತ್ತಿದೆ ಎಂದು ಅಸೋಸಿಯೇಶನ್ ಸದಸ್ಯರು ಆತಂಕ ವ್ಯಕ್ತಪಡಿಸಿದರು‌. ಈ ಹಿನ್ನೆಲೆಯಲ್ಲಿ ಫೋಟೋಗ್ರಾಫರ್ ಗಳ ಹಾಗು ಫೋಟೊಗ್ರಾಫಿ ಉಪಕರಣಗಳ ಸುರಕ್ಷತೆಯ ದೃಷ್ಟಿಯಿಂದ ಇನ್ನು ಮುಂದೆ ಮದುವೆ ಹಾಲ್‌ನಲ್ಲಿ ಮಾತ್ರ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ನಡೆಸಲು ಮತ್ತು ಮದುಮಗನ ಮನೆಗೆ ಸಾಗುವ ದಿಬ್ಬಣ (ಬಾರಾತ್) ಕಾರ್ಯಕ್ರಮಗಳ ಚಿತ್ರೀಕರಣ ಮಾಡದಿರಲು ಅಸೋಸಿಯೇಶನ್‌ನ ಎಲ್ಲಾ ಸದಸ್ಯರು ಸಭೆ ನಡೆಸಿ, ಸರ್ವಾನುಮತದಿಂದ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇನ್ನು ದಿನದಿಂದ ದಿನಕ್ಕೆ ಫೋಟೊಗ್ರಾಫಿ ಉಪಕರಣಗಳು, ಸಾಮಗ್ರಿಗಳು ಹಾಗೂ ನಿರ್ವಹಣಾ ವೆಚ್ಚಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಾಸ್‌ಪೋರ್ಟ್ ಸೈಜ್ ಫೋಟೊ ಸೇರಿದಂತೆ ವಿವಿಧ ಫೋಟೋಗ್ರಫಿ ಸೇವೆಗಳ ದರವನ್ನು ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಸಂತಾನ್ ಫರ್ನಾಂಡೀಸ್, ಸೂರಜ್ ಜೋಗಳೆಕರ್, ಬಾಲಚಂದ್ರ, ಶೈಲೇಶ, ಅನಂತ ಪೈ, ಅನಿಲ ನಾಯ್ಕ, ರವಿ ನಾಯ್ಕ, ರವಿ ಕಾಂಬ್ಳೆ, ಮನೋಜ ನಾಯ್ಕ, ಪ್ರಮೋದ ನಾಯ್ಕ, ಸುರೇಶ ಶೇಣ್ವಿ ಸೇರಿದಂತೆ ಹಲವರು ಇದ್ದರು.