ಕಾರವಾರ/ಮಡಗಾಂವ್: ಮಡಗಾಂವ್ ರೈಲು ನಿಲ್ದಾಣದಲ್ಲಿ ಹಳೆಯ ಪಾದಚಾರಿ ಮೇಲ್ಸೇತುವೆ (Foot Over Bridge – FOB) ತೆರವುಗೊಳಿಸುವ ಕಾಮಗಾರಿಯ ಹಿನ್ನೆಲೆಯಲ್ಲಿ ಜುಲೈ 24ರಂದು ಮಧ್ಯಾಹ್ನ 12.50 ರಿಂದ 5.50 ರವರೆಗೆ ಟ್ರಾಫಿಕ್ ಹಾಗೂ ವಿದ್ಯುತ್ ಬ್ಲಾಕ್ ಕೈಗೊಳ್ಳಲಾಗುತ್ತಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಈ ಅವಧಿಯಲ್ಲಿ 1, 2 ಮತ್ತು 3ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲು ಸಂಚಾರ ಸ್ಥಗಿತಗೊಳ್ಳಲಿದೆ. ನಿಗದಿತ ಎಲ್ಲಾ ರೈಲುಗಳ ಸಂಚಾರವನ್ನು 4, 5 ಮತ್ತು 6ನೇ ಪ್ಲಾಟ್‌ಫಾರ್ಮ್‌ಗಳ ಮೂಲಕ ನಿರ್ವಹಿಸಲಾಗುತ್ತದೆ. ಪ್ರಯಾಣಿಕರು ನಿಲ್ದಾಣಕ್ಕೆ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿ, ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ಗಳು ಹಾಗೂ ಸಾರ್ವಜನಿಕ ಘೋಷಣಾ ವ್ಯವಸ್ಥೆಯಲ್ಲಿ ಪ್ರಕಟವಾಗುವ ಪ್ಲಾಟ್‌ಫಾರ್ಮ್ ಮಾಹಿತಿಯನ್ನು ಗಮನಿಸಬೇಕು. ಅಲ್ಲದೆ ರೈಲ್ವೆ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸುವಂತೆ ಕೊಂಕಣ ರೈಲ್ವೆ ಮನವಿ ಮಾಡಿದೆ.

ಕಾಮಗಾರಿ ನಡೆಯುವ ವೇಳೆ ರೈಲುಗಳ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅಗತ್ಯ ಎಲ್ಲ ಕಾರ್ಯಾಚರಣಾ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಪ್ರಯಾಣಿಕರಿಗೆ ಆಗುವ ತಾತ್ಕಾಲಿಕ ಅಸೌಕರ್ಯಕ್ಕೆ ವಿಷಾದ ವ್ಯಕ್ತಪಡಿಸಿರುವ ಕೊಂಕಣ ರೈಲ್ವೆ, ಪ್ರಯಾಣಿಕರ ಸುರಕ್ಷತೆ ಮತ್ತು ನಿಲ್ದಾಣದ ಮೂಲಸೌಕರ್ಯ ಸುಧಾರಣೆಗಾಗಿ ಕೈಗೊಳ್ಳಲಾಗುತ್ತಿರುವ ಈ ಅಗತ್ಯ ಕಾಮಗಾರಿಗೆ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದೆ.