Joida: ತಾಲೂಕಿನ ಹನೋಲಿ ಕ್ರಾಸ್ ಸಮೀಪದ ಮುಖ್ಯ ರಸ್ತೆಯ ಬದಿಯಲ್ಲಿ ಕಾಡುಕೋಣಗಳ ಹಿಂಡು ಸಾಲಾಗಿ ನಿಂತಿರುವ ಅಪರೂಪದ ದೃಶ್ಯ ಗುರುವಾರ ಸ್ಥಳೀಯರು ಹಾಗೂ ಪ್ರವಾಸಿಗರ ಗಮನ ಸೆಳೆಯಿತು.
ಕಾಡಿನ ಅಂಚಿನಿಂದ ರಸ್ತೆ ಬದಿಗೆ ಬಂದಿದ್ದ ಕಾಡುಕೋಣಗಳು ಯಾವುದೇ ಆತಂಕವಿಲ್ಲದೆ ಸಾಕಷ್ಟು ಸಮಯ ಅಲ್ಲೇ ಶಾಂತವಾಗಿ ನಿಂತಿದ್ದವು. ಸಾಮಾನ್ಯವಾಗಿ ಮನುಷ್ಯರ ಚಲನವಲನ ಕಂಡ ಕೂಡಲೇ ಕಾಡಿನತ್ತ ಓಡುವ ಈ ವನ್ಯಜೀವಿಗಳು, ಇಲ್ಲಿ ಮಾತ್ರ ಸಾಕು ಪ್ರಾಣಿಗಳಂತೆ ನಿರಾಳವಾಗಿ ನಿಂತಿರುವುದು ಅಚ್ಚರಿ ಮೂಡಿಸಿತು.
ಈ ದೃಶ್ಯವನ್ನು ಕಂಡು ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಹಾಗೂ ಪ್ರವಾಸಿಗರು ತಮ್ಮ ಮೊಬೈಲ್‌ಗಳಲ್ಲಿ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ಸೆರೆಹಿಡಿದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ದೃಶ್ಯ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ಮುಖ್ಯ ರಸ್ತೆಯ ಸಮೀಪದಲ್ಲೇ ವನ್ಯಜೀವಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ವಾಹನ ಸವಾರರಲ್ಲಿ ಆತಂಕಕ್ಕೂ ಕಾರಣವಾಗಿದೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಅಕಸ್ಮಾತ್ ಕಾಡುಕೋಣಗಳು ರಸ್ತೆ ದಾಟುವ ಸಾಧ್ಯತೆ ಇರುವುದರಿಂದ ಅಪಘಾತದ ಭೀತಿ ಎದುರಾಗಬಹುದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಹನೋಲಿ ಕ್ರಾಸ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ನಿರಂತರ ನಿಗಾ ವಹಿಸಿ, ಅಗತ್ಯ ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸುವುದು ಹಾಗೂ ವಾಹನ ಸವಾರರಿಗೆ ಎಚ್ಚರಿಕೆ ನೀಡುವ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
