ಕಾರವಾರ: ನಗರದ ಬೈತಖೋಲ್ ಬಂದರಿನಲ್ಲಿ ಅಲಿಗದ್ದಾ ಕಂಪನಿಗೆ ಸೇರಿದ ಪದ್ಮನಾಭ್ ಹಡಗಿನಿಂದ ಬಿಟುಮೆನ್ (ಡಾಂಬರ್) ಸೋರಿಕೆಯಾಗಿರುವ ಘಟನೆ ಪರಿಸರದ ಬಗ್ಗೆ ಆತಂಕ ಮೂಡಿಸಿದೆ. ಹಡಗಿನಿಂದ ಬಿಸಿಯಾದ ಬಿಟುಮೆನ್ ಬಂದರಿನ ಆವರಣದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೆಲ್ಲಿಕೊಂಡಿದ್ದು, ಅದರ ಒಂದು ಭಾಗ ಸಮುದ್ರಕ್ಕೂ ಸೇರಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಸಮುದ್ರ ಮಾಲಿನ್ಯದ ಭೀತಿ ಎದುರಾಗಿದೆ.

ಮಾಹಿತಿಯ ಪ್ರಕಾರ, ಒಮಾನ್‌ನ ಶಿನಾಸ್ ಬಂದರಿನಿಂದ ಸುಮಾರು 4,460.551 ಮೆಟ್ರಿಕ್ ಟನ್ ಬಿಟುಮೆನ್ ಸಾಗಿಸಿಕೊಂಡು ಬಂದಿದ್ದ ಹಡಗಿನಿಂದ ಸರಕು ಇಳಿಸುವ ವೇಳೆ ಅಥವಾ ತಾಂತ್ರಿಕ ದೋಷದಿಂದ ಸೋರಿಕೆ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ. ಘಟನೆಯ ನಿಖರ ಕಾರಣ ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ.
ಬಿಟುಮೆನ್ ಸಮುದ್ರದ ನೀರಿಗೆ ಬೆರೆತರೆ ಮೀನು ಸೇರಿದಂತೆ ವಿವಿಧ ಜಲಚರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಸಮುದ್ರದ ಮೇಲ್ಮೈಯಲ್ಲಿ ಬಿಟುಮೆನ್ ಪದರ ರೂಪುಗೊಂಡರೆ ಸಣ್ಣ ದೋಣಿಗಳ ಸಂಚಾರಕ್ಕೂ ಅಡಚಣೆ ಉಂಟಾಗುವ ಸಾಧ್ಯತೆಯಿದ್ದು, ದೋಣಿಗಳ ತಳಭಾಗಕ್ಕೆ ಡಾಂಬರ್ ಅಂಟಿಕೊಳ್ಳುವುದರಿಂದ ಮೀನುಗಾರರು ಹಾಗೂ ದೋಣಿ ಮಾಲೀಕರಿಗೆ ಆರ್ಥಿಕ ನಷ್ಟ ಉಂಟಾಗಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಸೋರಿಕೆಯ ಪ್ರಮಾಣ ಎಷ್ಟು, ಸಮುದ್ರಕ್ಕೆ ಎಷ್ಟು ಪ್ರಮಾಣದ ಬಿಟುಮೆನ್ ಸೇರಿದೆ ಹಾಗೂ ಪರಿಸರದ ಮೇಲೆ ಅದರ ಪರಿಣಾಮ ಏನು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಲ್ಲದೆ, ಘಟನೆಗೆ ನಿಖರ ಕಾರಣವೇನು, ಸುರಕ್ಷತಾ ನಿಯಮಗಳ ಪಾಲನೆಯಲ್ಲಿ ಯಾವುದೇ ನಿರ್ಲಕ್ಷ್ಯ ನಡೆದಿದೆಯೇ, ಪರಿಸರ ಹಾನಿಯ ಪ್ರಮಾಣ ಎಷ್ಟು ಹಾಗೂ ಈ ಘಟನೆಗೆ ಯಾರು ಹೊಣೆ ಎಂಬುದರ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಕುರಿತು ಬಂದರು ಆಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಗಳು ಪರಿಶೀಲನೆ ನಡೆಸಿ, ಪರಿಸರದ ಮೇಲಿನ ಪರಿಣಾಮವನ್ನು ಮೌಲ್ಯಮಾಪನ ಮಾಡಿ ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಅಧಿಕೃತ ವರದಿ ಬಳಿಕ ಸೋರಿಕೆಯ ನಿಖರ ಪ್ರಮಾಣ ಮತ್ತು ಪರಿಸರ ಹಾನಿಯ ವಿವರಗಳು ಸ್ಪಷ್ಟವಾಗುವ ನಿರೀಕ್ಷೆಯಿದೆ.
