ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪುರಾಣ ಪ್ರಸಿದ್ಧ ಗೋಕರ್ಣ ಮಹಾಗಣಪತಿ ದೇವಾಲಯದಲ್ಲಿನ ಪ್ರಾಚೀನ ಶಿಲಾಮಯ ಮಹಾಗಣಪತಿ ಮೂರ್ತಿಯ ಸಂರಕ್ಷಣೆಗಾಗಿ ಧಾರ್ಮಿಕ ದತ್ತಿ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.

ಮೂರ್ತಿ ಸವಕಳಿಯಾಗುತ್ತಿರುವ ಹಿನ್ನೆಲೆಯಲ್ಲಿ ಭಕ್ತರು ಗಣಪತಿ ಮೂರ್ತಿಯನ್ನು ಸ್ಪರ್ಶಿಸಿ ಪೂಜೆ ಸಲ್ಲಿಸುವ ಪದ್ಧತಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಆತ್ಮಲಿಂಗ ದರ್ಶನಕ್ಕೆ ತೆರಳುವ ಮುನ್ನ ಭಕ್ತರು ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿ ದ್ವಿಭುಜ ಮಹಾಗಣಪತಿಯ ಸ್ಪರ್ಶ ದರ್ಶನ ಪಡೆಯುವುದು ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಆದರೆ ನಿರಂತರ ಸ್ಪರ್ಶದಿಂದ ಮೂರ್ತಿಯ ಕೈ, ಭುಜ ಹಾಗೂ ಎದೆ ಭಾಗಗಳಲ್ಲಿ ಹೆಚ್ಚು ಸವಕಳಿ ಉಂಟಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.

ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಸುಧಾ ತಳವಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೂರ್ತಿಯ ಸಂರಕ್ಷಣೆಗೆ ಆದ್ಯತೆ ನೀಡುವ ಉದ್ದೇಶದಿಂದ ಸ್ಪರ್ಶ ದರ್ಶನ ಹಾಗೂ ಮೂರ್ತಿಯನ್ನು ಸ್ಪರ್ಶಿಸಿ ನಡೆಸುವ ಪೂಜಾ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಅಷ್ಟೇ ಅಲ್ಲದೆ, ಭಕ್ತರ ಹೆಚ್ಚಿನ ಸಂಖ್ಯೆಯು ಸೇರುವ ಸಂಕಷ್ಟಿ ಚತುರ್ಥಿ ಹಾಗೂ ಗಣೇಶ ಚತುರ್ಥಿ ಸಂದರ್ಭದಲ್ಲೂ ಇದೇ ನಿಯಮ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ. ಇದರ ಜೊತೆಗೆ ಮಹಾಗಣಪತಿಗೆ ವಿಶೇಷವಾಗಿ ನಡೆಯುತ್ತಿದ್ದ ಕೊಟ್ಟೆ ಕಣಜ ಹಾಗೂ ಸಕ್ಕರೆ ಕಣಜ ಸೇವೆಗಳನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ದೇವರ ಪ್ರಾಚೀನ ಶಿಲಾಮೂರ್ತಿಯ ಮೂಲ ಸ್ವರೂಪವನ್ನು ಮುಂದಿನ ಪೀಳಿಗೆಗೂ ಉಳಿಸಿ ಸಂರಕ್ಷಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ದೇವಾಲಯ ಆಡಳಿತ ಹಾಗೂ ಧಾರ್ಮಿಕ ದತ್ತಿ ಇಲಾಖೆ ಸ್ಪಷ್ಟಪಡಿಸಿದೆ.