ಶಿರಸಿ: ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವಾರಂಟ್ ಆರೋಪಿಯೊಬ್ಬ ನ್ಯಾಯಾಲಯದ ಆವರಣದಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿ, ನಂತರ ಪೋಲಿಸರು ಹುಡುಕಾಡಿ ಮತ್ತೆ ವಶಕ್ಕೆ ಪಡೆದ ಘಟನೆ ಶಿರಸಿಯಲ್ಲಿ ನಡೆದಿದೆ.

ದಾಸನಕೊಪ್ಪದ ಬದನಗೋಡದ ನಿವಾಸಿ ಸ್ವಾಮೇಲ್ @ ಸುನೀಲ್ ಚಂದ್ರಪ್ಪ ಬೋವಿವಡ್ಡರ (24) ಎಂಬಾತನೇ ಎಸ್ಕೇಪ್‌ ಆಗಿದ್ದ ರೌಡಿ ಶೀಟರ್‌.

ಬನವಾಸಿ ಪೊಲೀಸ್ ಠಾಣೆಯ ಸಿಬ್ಬಂದಿಯು ಆರೋಪಿಯನ್ನು ವೈದ್ಯಕೀಯ ತಪಾಸಣೆಯ ಬಳಿಕ ಶಿರಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ಜುಲೈ 14ರಿಂದ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ನ್ಯಾಯಾಂಗ ಬಂಧನದ ಆದೇಶ ತಿಳಿಯುತ್ತಿದ್ದಂತೆಯೇ ಆರೋಪಿ ಬೆಂಗಾವಲಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಪೊಲೀಸ್ ಸಿಬ್ಬಂದಿಯನ್ನು ತಳ್ಳಿ ನೆಲಕ್ಕೆ ಬೀಳಿಸಿ, ಮತ್ತೊಬ್ಬ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಿ ಅಲ್ಲಿಂದ ಓಡಿ ಎಸ್ಕೇಪ್‌ ಆಗಿದ್ದಾನೆ ಎನ್ನಲಾಗಿದೆ.

ಘಟನೆಯ ಮಾಹಿತಿ ತಿಳಿದ ತಕ್ಷಣ ಮಾರ್ಕೇಟ್‌ ಯಾರ್ಡ, ನಗರ ಹಾಗೂ ಸಂಚಾರ ಪೊಲೀಸ್ ಠಾಣೆಗಳ ಸಿಬ್ಬಂದಿ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಎಲ್ಲೆಡೆ ನಾಕಾ ಬಂಧಿ ನಡೆಸಿ ಎಸ್ಕೇಪ್‌ ಆದ ಆರೋಪಿ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದರು. ಕೆಲ ಹೊತ್ತಿನ ಬಳಿಕ ಆರೋಪಿಯು ಶಿರಸಿ–ಯಲ್ಲಾಪುರ ರಸ್ತೆಯ ಸಮೀಪ ತೋಟಗಾರ್ಸ ಬಾಯ್ಸ್ ಹಾಸ್ಟೆಲ್ ಪಕ್ಕದ ಗಿಡಗಂಟಿಯಲ್ಲಿ ಅಡಗಿ ಕುಳಿತಿದ್ದನ್ನು ಪತ್ತೆಹಚ್ಚಿ ಮತ್ತೆ ವಶಕ್ಕೆ ಪಡೆದರು.

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕಾನೂನುಬದ್ಧ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪದಡಿ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 62/2026 ದಾಖಲಿಸಿ, ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 132, 121(1) ಹಾಗೂ 262 ಅಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.