ಚಿನ್ನದ ದರ ಗಗನಕ್ಕೆ ಏರಿದೆ. ಚಿನ್ನಾಭರಣ ಖರೀದಿ ಮಾಡಬೇಕಂದ್ರೆ ಒಂದೋ ಲೋನ್ ಮಾಡಬೇಕು, ಇಲ್ಲವೇ ಆಸ್ತಿ ಮಾರಬೇಕಾದ ಸ್ಥಿತಿಯಿದೆ. ಬಡವರ ಪಾಲಿಗಂತೂ ಚಿನ್ನ ಸದ್ಯಕ್ಕಂತೂ ಗಗನ ಕುಸುಮ. ಈ ಸಂದರ್ಭವನ್ನು ಉಪಯೋಗಿಸಿ ಸುಲಭದಲ್ಲಿ ಶ್ರೀಮಂತರಾಗೋ ಉದ್ದೇಶದಿಂದ ಕಳ್ಳರ ಕಣ್ಣು ಇದೀಗ ಚಿನ್ನದಂಗಡಿಗಳ ಮೇಲೆ ಬಿದ್ದಿದೆ.‌

ಗ್ರಾಮೀಣ ಪ್ರದೇಶಗಳ ಚಿನ್ನದಂಗಡಿ ದರೋಡೆ ಮಾಡೋದು ಸುಲಭ ಅನ್ನೋ ಕಾರಣಕ್ಕೆ ಸಣ್ಣಪುಟ್ಟ ಚಿನ್ನದಂಗಡಿಗಳನ್ನೇ ಖದೀಮರು ಟಾರ್ಗೆಟ್ ಮಾಡಿ ಹೆದರಿಸಿ ಬೆದರಿಸಿ ಚಿನ್ನ ದೋಚುತ್ತಿದ್ದಾರೆ. ಭೀಮಾತೀರದ ಕುಖ್ಯಾತಿಗೆ ಪಾತ್ರವಾಗಿರೋ ವಿಜಯಪುರ ಜಿಲ್ಲೆಯಲ್ಲೂ ಇಂಥದ್ದೇ ಪ್ರಕರಣವೊಂದು ದಾಖಲಾಗಿದೆ.‌

ಚಿನ್ನದ ದರ ಏರಿಕೆಯಾದ ನಂತರವಂತೂ ರಾಜ್ಯದ ಮೂಲೆ ಮೂಲೆಯಲ್ಲು ಚಿನ್ನ ದರೋಡೆ, ಸರಗಳ್ಳತನದಂತ ಪ್ರಕರಣಗಳೇ ಹೆಚ್ಚಾಗ್ತಿವೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ಚಿನ್ನದಂಗಡಿಯನ್ನೇ ಖದೀಮರು ಲೂಟಿ ಮಾಡಿದ್ದಾರೆ‌‌. ಕೈಯಲ್ಲಿ ಗನ್ ಹಿಡಿದು ಮಹಾರುದ್ರ ಕಂಚಗಾರ್ ಎಂಬುವರ ಅಂಗಡಿಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು ಅಂಗಡಿಯಲ್ಲಿನ ಚಿನ್ನವನ್ನೆಲ್ಲ ದೋಚಿದ್ದಾರೆ.‌

ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಅಂಗಡಿಗೆ ನುಗ್ಗಿದವರು ಮೊದಲು ಸ್ಥಳೀಯರನ್ನ ಗನ್ ತೋರಿಸಿ ಹೆದರಿಸಿದ್ದಾರೆ‌. ಖದೀಮರ ಕೃತ್ಯವನ್ನು ಸೆರೆ ಹಿಡಿಯಲು ಆತ್ಮಲಿಂಗ ಹೂಗಾರ್ ಎಂಬಾತ ಮೊಬೈಲ್ ಹಿಡಿದು ನಿಂತಿದ್ದ ವೇಳೆ ಆತನ ಬಲಗಾಲಿಗೆ ಗುಂಡು ಬಿದ್ದಿದ್ದು, ಸದ್ಯ ಗಾಯಾಳುವನ್ನು ಬಿಎಲ್ಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ದರೋಡೆಗೆ ಬಂದವರು ಗುರುತು ಪತ್ತೆಯಾಗದಿರಲಿ ಎಂದು ತಲೆಗೆ ಹೆಲ್ಮೆಟ್, ಕಪ್ಪು ಬಣ್ಣದ ಜಾಕೇಟ್, ಪಿಂಗರ್ ಪ್ರಿಂಟ್ ಸಹ ಮೂಡದಂತೆ ಕೈಗೆ ಬ್ಲೌಜ್ ಧರಿಸಿದ್ದಲ್ಲದೇ, ದರೋಡೆಗೆ ಕಪ್ಪು ಬಣ್ಣದ ಯುನಿಕಾರ್ನ್ ಬೈಕ್ ಬಳಕೆ ಮಾಡಿದ್ದಾರೆ‌. ಪ್ರಾಥಮಿಕ ತನಿಖೆಯಲ್ಲಿ 205 ಗ್ರಾಂ ಚಿನ್ನಾಭರಣ, ಒಂದು ಕೆ.ಜಿ ಬೆಳ್ಳಿಯನ್ನು ದರೋಡೆ ಮಾಡಿರೋದು ಬೆಳಕಿಗೆ ಬಂದಿದ್ದು, ಸಿಸಿಕ್ಯಾಮೆರಾದ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ದರೋಡೆಕೋರರ ಬೆನ್ನಟ್ಟಿದ್ದಾರೆ.

ದರೋಡೆಕೋರರು ಚಿನ್ನದೋಚಿ ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಘಟನೆ ಬಗ್ಗೆ ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ನಡೆದ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌