ಮುರುಡೇಶ್ವರ: ಸಮಯಪ್ರಜ್ಞೆ, ಧೈರ್ಯ ಮತ್ತು ಕರ್ತವ್ಯನಿಷ್ಠೆ ಪ್ರದರ್ಶಿಸಿದ ಕೊಂಕಣ ರೈಲ್ವೆಯ ಮುರುಡೇಶ್ವರ ರೈಲು ನಿಲ್ದಾಣದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ ಅವರು ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಪ್ರಯಾಣಿಕನ ಜೀವ ಉಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಜುಲೈ 13ರಂದು ಬೆಳಿಗ್ಗೆ ಸುಮಾರು 7.56ಕ್ಕೆ ಮುರುಡೇಶ್ವರ ರೈಲು ನಿಲ್ದಾಣದಿಂದ ರೈಲು ಸಂಖ್ಯೆ 16312 ಅಪ್ ಹೊರಡುತ್ತಿದ್ದ ವೇಳೆ, ಮೊಹಮ್ಮದ್ ಗೌಫುರ್ (22) ಎಂಬ ಪ್ರಯಾಣಿಕ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಮುಂದಾಗಿದ್ದಾನೆ. ಈ ವೇಳೆ ಆತ ಆಯತಪ್ಪಿ ರೈಲಿನೊಂದಿಗೆ ಎಳೆಯಲ್ಪಡುವ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ದೃಶ್ಯವನ್ನು ಗಮನಿಸಿದ ಕರ್ತವ್ಯದಲ್ಲಿದ್ದ ಪಾಯಿಂಟ್ಸ್‌ಮನ್ ಗಣಪತಿ ನಾಯ್ಕ್ (ಉದ್ಯೋಗಿ ಸಂಖ್ಯೆ: 6241) ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸಿ, ಪ್ರಯಾಣಿಕನನ್ನು ಬಿಗಿಯಾಗಿ ಹಿಡಿದು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವಿನ ಅಂತರಕ್ಕೆ ಜಾರಿಹೋಗದಂತೆ ರಕ್ಷಿಸಿದರು.ರೈಲು ಸಂಪೂರ್ಣವಾಗಿ ನಿಲ್ಲುವವರೆಗೂ ಎಚ್ಚರಿಕೆಯಿಂದ ಹಿಡಿದುಕೊಂಡು ನಿಂತು ಸಂಭವಿಸಬಹುದಾಗಿದ್ದ ಭೀಕರ ದುರಂತವನ್ನು ತಪ್ಪಿಸಿದರು.

ಗಣಪತಿ ನಾಯ್ಕ್ ಅವರ ಸಮಯಪ್ರಜ್ಞೆ, ಧೈರ್ಯ ಹಾಗೂ ಕರ್ತವ್ಯನಿಷ್ಠೆಯನ್ನು ಕೊಂಕಣ ರೈಲ್ವೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ (CMD) ಸಂತೋಷ್ ಕುಮಾರ್ ಝಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಅವರ ಈ ಸಾಹಸ ಕಾರ್ಯಕ್ಕೆ ಗೌರವ ಸೂಚಕವಾಗಿ ₹10,000 ನಗದು ಬಹುಮಾನವನ್ನು ಘೋಷಿಸಿದ್ದಾರೆ. ಕೊಂಕಣ ರೈಲ್ವೆಯ ಕಾರವಾರ ವಿಭಾಗದ ವಲಯ ಮೇಲ್ವಿಚಾರಕ ಸಂಜೀವ ಪೆಡನೇಕಾರ್ (AS/KAWR) ಅವರು ಸಿಎಂಡಿ ಪರವಾಗಿ ಗಣಪತಿ ನಾಯ್ಕ್ ಅವರನ್ನು ಸನ್ಮಾನಿಸಿ, ₹10 ಸಾವಿರ ನಗದು ಬಹುಮಾನವನ್ನು ಹಸ್ತಾಂತರಿಸಿದರು.

ಕೊಂಕಣ ರೈಲ್ವೆಯ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕಿ ಕೆ. ಸುಧಾ ಕೃಷ್ಣಮೂರ್ತಿ, ಗಣಪತಿ ನಾಯ್ಕ್ ಅವರ ಈ ಸಮಯೋಚಿತ ಕಾರ್ಯ ಇಡೀ ಕೊಂಕಣ ರೈಲ್ವೆಗೆ ಹೆಮ್ಮೆ ತರುವಂತದ್ದಾಗಿದೆ. ಇಂತಹ ಸಿಬ್ಬಂದಿಯ ಕರ್ತವ್ಯನಿಷ್ಠೆ ರೈಲ್ವೆಯ ಸುರಕ್ಷತಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ