ಅಂಕೋಲಾ: ಸುಮಾರು ಹದಿನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಅಂಕೋಲಾ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 260/2012 ಹಾಗೂ ಸಿಸಿ ಸಂಖ್ಯೆ 159/2013 ಪ್ರಕರಣದ ಆರೋಪಿ ಬೆಳಗಾವಿಯ ತೊಟದಗಲ್ಲಿಯ ನಿವಾಸಿ ರಫಿಕ್ ಅಹ್ಮದ್ 2013ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಆರೋಪಿಯ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿಯಿಂದ ಕೇರಳದ ಕಡೆ ಲಾರಿ ಚಾಲಕನಾಗಿ ತೆರಳುತ್ತಿದ್ದ ವೇಳೆ ಅಂಕೋಲಾ ತಾಲೂಕಿನ ಬಾಳೆಗುಳಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದರು. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಈ ಕಾರ್ಯಾಚರಣೆಯನ್ನು ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ ಅವರ ನೇತೃತ್ವದಲ್ಲಿ ಪಿಎಸ್‌ಐ ಸುನೀಲ ಹುಲ್ಲೋಳ್ಳಿ, ಎಎಸ್‌ಐ ದೇವಿದಾಸ ಚಾಪೋಲೇಕರ ಹಾಗೂ ಸಿಬ್ಬಂದಿಗಳಾದ ಮೋಹನ ಗೌಡ, ಮಹಾದೇವ ಸಿದ್ದಿ, ರಮೇಶ್ ತುಂಗಳ, ರಯೀಸ ಬಾಗವಾನ ಮತ್ತು ಎಚ್‌ಆರ್‌ಪಿ ವಾಹನ ಚಾಲಕ ಉಮೇಶ್ ಗಾಳಿ ಯಶಸ್ವಿಯಾಗಿ ನಡೆಸಿದರು.
