Karwar| ಮಹಾರಾಷ್ಟ್ರದ ನಾಸಿಕ್ ನಲ್ಲಿನ ಟಿಸಿಎಸ್ ಐಟಿ ಕಂಪನಿಯಲ್ಲಿ ಹಿಂದು ಹೆಣ್ಣು ಮಕ್ಕಳ ಮೇಲಾದ ದೌರ್ಜನ್ಯ ನಮ್ಮ ರಕ್ತ ಕುದಿಯುವಂತೆ ಮಾಡಿದೆ ಎಂದು ಕರ್ನಾಟಕ ಹೈ ಕೋರ್ಟಿನ ವಿಶ್ರಾಂತ ನ್ಯಾಯಾಧೀಶೆ ಉಮಾ ಹೇಳಿದರು.
ಅವರು ಕಾರವಾರದ ಮಾಲಾದೇವಿ ಮೈದಾನದಲ್ಲಿ ಶೃಂಗೇರಿಯ ವಿಧುಶೇಖರ ಭಾರತೀ ಸ್ವಾಮಿಗಳಿಗೆ ಏರ್ಪಡಿಸಲಾಗಿದ್ದ ‘ಗುರುವಂದನೆ’ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನ ನಿರ್ವಹಣೆಗಾಗಿ ದುಡಿಯಲು ತೆರಳಿರುವ 18 ರಿಂದ 25 ವರ್ಷದ ಹೆಣ್ಣುಮಕ್ಕಳ ಮೇಲೆ ನಡೆದ ದೌರ್ಜನ್ಯ ನಮ್ಮ ರಕ್ತ ಕುದಿಯುವಂತೆ ಮಾಡಿದೆ. ಅಷ್ಟೇಲ್ಲಾ ದೌರ್ಜನ್ಯ ನಡೆದರೂ ಸಹಿಸಿಕೊಂಡಿರುವುದು ನಮ್ಮ ಬಹುಸಂಖ್ಯಾತ ಹಿಂದುಗಳ ದೌರ್ಬಲ್ಯ ಎಂದು ಆಕ್ರೋಶ ಹೊರಹಾಕಿದರು.
ಈ ಎಲ್ಲಾ ಕಾರಣಗಳಿಂದ ನಮ್ಮ ಮನೆಗಳಲ್ಲಿಯೇ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಪಾಠವನ್ನು ಚಿಕ್ಕಂದಿನಿಂದಲೇ ಕಲಿಸಿ ಅವರನ್ನು ಮಾನಸಿಕವಾಗಿ ಸದೃಢರನ್ನಾಗಿ ಮಾಡಬೇಕಿದೆ. ಇಂದು ನಮ್ಮ ಎಲ್ಲಾ ಸಮಾಜ ಒಂದಾಗಿ ಒಗ್ಗಟ್ಟಾಗಿ ನಿಲ್ಲುವ ಸಂದರ್ಭ ಬಂದಿದೆ. ಹೆಣ್ಣು ಮಕ್ಕಳ ಜೊತೆ ಗಂಡು ಮಕ್ಕಳು ಸಹ ಇಂದು ದೌರ್ಜನ್ಯ, ಶೋಷಣೆಗೊಳಗಾಗುತ್ತಿದ್ದು, ಈ ಶೋಷಣೆ ಹೊರ ಜಗತ್ತಿಗೆ ತಿಳಿಸುವಂತಹ ಹಾಗೂ ಅದನ್ನು ತಡೆಯಲು ತಕ್ಕದಾದ ಶಾಸ್ತಿ ಮಾಡಬಹುದಾದ ಯೋಗ್ಯತೆ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ಇನ್ನು ಧರ್ಮ, ಸಂಸ್ಕೃತಿಗಳ ಬಗ್ಗೆ ನಮ್ಮ ಮಹಿಳೆಯರಲ್ಲಿರುವ ಗೌರವ, ವಿಶ್ವಾಸ ಪುರುಷರಲ್ಲಿ ಕಾಣಿಸಿಕೊಳ್ಳದ ಬಗ್ಗೆ ವಿಷಾಧಿಸಿದ ಅವರು, ನಮ್ಮ ಮನೆ ಮಕ್ಕಳನ್ನು ಧರ್ಮ, ಸಂಸ್ಕೃತಿ ಹಾಗೂ ಸಂಸ್ಕಾರಗಳ ಬಗೆಗಿನ ತಿಳುವಳಿಕೆ ಬಾಲ್ಯಂದಿದಲೇ ಮನೆಯಿಂದಲೇ ನೀಡಿ ಎಂಥ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರನ್ನಾಗಿ ಮಾಡಬೇಕಿದೆ ಎಂದರು.
