Sirsi| ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆಯ ಕೊನೆಯ ದಿನ, ಭಕ್ತರ ಮನಃ ಸ್ಪರ್ಶಿಸುವ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು.
ಒಂಭತ್ತು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಮಾರಿಕಾಂಬಾ ಜಾತ್ರೆಯ ಅಂತಿಮ ದಿನ, ಬಿಡಕಿ ಬೈಲಿನ ಜಾತ್ರಾ ಗದ್ದುಗೆಯಿಂದ ಅಮ್ಮ ಇಳಿದು ಹೊರಟ ದೃಶ್ಯ ಭಕ್ತರನ್ನು ಕಣ್ಣೀರಾಗಿಸಿತು. ಭಕ್ತರ ಹೆಗಲ ಮೇಲೆ ದೇವಿಯನ್ನು ಗೌರವಪೂರ್ವಕವಾಗಿ ಕೊಂಡೊಯ್ಯಲಾಗಿದ್ದು, ಸಂಪ್ರದಾಯದಂತೆ ಮಾತಂಗಿ ಚಪ್ಪರಕ್ಕೆ ಬೆಂಕಿ ಹಚ್ಚುವ ಮೂಲಕ ಜಾತ್ರೆಗೆ ವಿಧಿವತ್ತಾದ ತೆರೆ ಎಳೆಯಲಾಯಿತು. ಅದಾದ ನಂತರ ದೇವಿ ತನ್ನ ತವರಿಗೆ ತೆರಳಿದಳು.

ಬನವಾಸಿ ರಸ್ತೆಯಲ್ಲಿರುವ ವಿಸರ್ಜನಾ ಪೀಠದಲ್ಲಿ ಸಂಪ್ರದಾಯಬದ್ಧವಾಗಿ ಮೂರ್ತಿಯ ವಿಸರ್ಜನೆ ನೆರವೇರಿಸಲಾಯಿತು. ಈ ಮೂಲಕ ಜಾತ್ರೋತ್ಸವ ಸಂಪನ್ನವಾಯಿತು.
ಜಾತ್ರೆಯ ಬಳಿಕ ದೇವಸ್ಥಾನವನ್ನು ಯುಗಾದಿಯವರೆಗೆ ಸುಮಾರು ಹದಿನೈದು ದಿನಗಳ ಕಾಲ ಮುಚ್ಚಲಾಗುತ್ತದೆ. ಈ ಅವಧಿಯಲ್ಲಿ ಭಕ್ತರಿಗೆ ದೇವಸ್ಥಾನದ ಒಳ ಪ್ರವೇಶ ಇರುವುದಿಲ್ಲ. ದೇವಿಯ ದರ್ಶನ ಹಾಗೂ ಯಾವುದೇ ಪೂಜಾ ಕೈಂಕರ್ಯಗಳು ನಡೆಯುವುದಿಲ್ಲ.
ಯುಗಾದಿಯಂದು ದೇವಿಯ ಪುನರ್ ಪ್ರತಿಷ್ಠಾಪನೆ ನೆರವೇರಿಸಲ್ಪಡುತ್ತಿದ್ದು, ಅಂದಿನಿಂದ ದೇವಸ್ಥಾನದಲ್ಲಿ ನಿತ್ಯ ಪೂಜೆ, ದರ್ಶನ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಪುನಃ ಆರಂಭಗೊಳ್ಳುತ್ತವೆ.
ದೇವಿ ಗದ್ದುಗೆಯಿಂದ ಇಳಿದು ಯುಗಾದಿಯಂದು ಪುನರ್ ಪ್ರತಿಷ್ಠಾಪನೆಯಾಗುವವರೆಗಿನ ಈ ಅವಧಿಯನ್ನು ಸ್ಥಳೀಯರು ‘ಸೂತಕ’ದಂತೆ ಆಚರಿಸುತ್ತಾರೆ. ಈ ಸಮಯದಲ್ಲಿ ಯಾವುದೇ ಶುಭಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ಇದು ಸ್ಥಳೀಯ ಸಂಪ್ರದಾಯವಾಗಿದ್ದು, ಇಂದಿಗೂ ಜನರು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದಾರೆ.
