Kumta|’ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದ ದಾಸ ಶ್ರೇಷ್ಠ ಪುರಂದರ ದಾಸರ ವಾಣಿಗೆ ವಿರುದ್ಧವಾಗಿ ಗುರುವನ್ನೇ ‘ಗುಲಾಮ’ರಾಗಿಸಿದ ಒಂದು ವಿಲಕ್ಷಣ ಬೆಳವಣಿಗೆ ಕುಮಟಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆದಿದೆ.
ಮಾಡದ ತಪ್ಪಿಗೆ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಬಹಿರಂಗವಾಗಿ ಕ್ಷಮೆ ಕೇಳಿದ ಘಟನೆ ಈಗ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಅಲ್ಲದೇ ಕಾಲೇಜಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟ ರಾಜಕೀಯ ನಾಯಕರ ಮನಸ್ಥಿತಿಯ ಬಗ್ಗೆಯೂ ಪ್ರಜ್ಞಾವಂತರಲ್ಲಿ ಆತಂಕ ಮೂಡಿದೆ.
ಘಟನೆಯ ವಿವರ: ಕಾಲೇಜಿಗೆ ವಿದ್ಯಾರ್ಥಿ ದಾಖಲಾಗುವ ಪೂರ್ವದಲ್ಲಿ ದಾಖಲಾತಿ ಶುಲ್ಕ ಪಡೆಯಲಾಗುತ್ತದೆ. ಆ ಶುಲ್ಕದಲ್ಲಿ ಕಾಲೇಜು ಅಭಿವೃದ್ಧಿ, ಕ್ರೀಡೆ, ಗ್ರಂಥಾಲಯ ಸೇರಿದಂತೆ ವಿವಿಧ ವಿಭಾಗಕ್ಕೆ ಶುಲ್ಕ ವಿಂಗಡಣೆ ಮಾಡಲಾಗುತ್ತದೆ. ಅದರಂತೆ ಒಂದು ವಿಭಾಗ ಗುರುತಿನ ಚೀಟಿ ನೀಡುವುದು. ದಾಖಲಾತಿ ಪೂರ್ವದಲ್ಲಿ ಪಡೆದ ಶುಲ್ಕದಲ್ಲಿ 53 ರೂಪಾಯಿ ಗುರುತಿನ ಚೀಟಿಗಾಗಿ ಮೀಸಲಿಡಲಾಗುತ್ತದೆ. ಅದರಂತೆ ಎಲ್ಲಾ ವಿದ್ಯಾರ್ಥಿಗಳು ಗುರುತಿನ ಚೀಟಿ ಹೊಂದುವುದು ಕಡ್ಡಾಯವಾಗಿರುತ್ತದೆ.
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಐಡಿ ಕಾರ್ಡ್ ಗಾಗಿ ಪ್ರತಿ ವಿದ್ಯಾರ್ಥಿಗಳಿಂದ 53 ರೂಪಾಯಿ ಪಡೆಯಲಾಗಿತ್ತು. ನಮಗೆ ಐಡಿ ಕಾರ್ಡ್ ಬೇಡ 53 ರೂಪಾಯಿ ವಾಪಸ್ಸ್ ನೀಡಿ ಎಂದು 4 ಹಾಗೂ 6 ನೇ ಸೆಮಿಸ್ಟರ್ ವಿದ್ಯಾರ್ಥಿಗಳು ತಗಾದೆ ತೆಗೆದಿದ್ದಾರೆ. ಸರ್ಕಾರದ ಆದೇಶವಿದೆ, ಪ್ರತಿಯೊಬ್ಬ ವಿದ್ಯಾರ್ಥಿಗಳು ಗುರುತಿನ ಚೀಟಿ ಪಡೆಯಬೇಕು. ಗುರುತಿನ ಚೀಟಿಗಾಗಿ ಪಡೆದ ಹಣವನ್ನು ವಾಪಸ್ ಕೊಡಲು ಬರುವುದಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ.
ಈ ಕ್ಷುಲ್ಲಕ ವಿಚಾರವಾಗಿ ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವಿನ ಜಗಳದಲ್ಲಿ ವಿದ್ಯಾರ್ಥಿಯ ಪಾಲಕನೋರ್ವ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಆರು ಜನ ಸಿಬ್ಬಂದಿಗಳ ಮೇಲೆ ಜಾತಿ ನಿಂದನೆ ದೂರು ದಾಖಲಿಸಿದ್ದಾರೆ. ಇನ್ನೂ ಕಾಲೇಜಿನ ಮೀಟಿಂಗ್ ಕೊಠಡಿಗೆ ಅಕ್ರಮ ಪ್ರವೇಶ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಕುರಿತಂತೆ ಆ ಪೋಷಕರು ಹಾಗೂ ಎರಡು ವಿದ್ಯಾರ್ಥಿಗಳ ಮೇಲೆ ಕಾಲೇಜಿನ ಸಿಬ್ಬಂದಿಗಳೂ ದೂರು ದಾಖಲಿಸಿದ್ದಾರೆ.
ಇಂಥಹ ಸಂದರ್ಭದಲ್ಲೇ ಎಂಟ್ರಿ ಕೊಡ್ತಾರೆ ನೋಡಿ ಅಜ್ಜಿ ಸುಟ್ಟ ಬೆಂಕಿಯಲ್ಲೇ ಚಳಿ ಕಾಯಿಸಿಕೊಳ್ಳೊ ಸಂಘಟನೆಗಳು ಹಾಗೂ ರಾಜಕೀಯ ನಾಯಕರು. 53 ರೂಪಾಯಿಗಾಗಿ ನಡೆದ ಮಾತಿನ ಚಕಮಕಿಯಲ್ಲಿ ಕಾಲೇಜಿನ ಆರು ಜನ ಸಿಬ್ಬಂದಿಗಳ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಸತ್ಯಾಸತ್ಯತೆ ನ್ಯಾಯಾಲಯ ತಿರ್ಮಾನಿಸಲಿದೆಯಾದರೂ ಒಂದೊಮ್ಮೆ ಎಲ್ಲಾ ಆರು ಜನ ಸಿಬ್ಬಂದಿಗಳು ಅರೆಸ್ಟ್ ಆಗಿ ಸಂಸ್ಪೆಂಡ್ ಆದರೆ ಉಳಿದಿರುವ ವಿದ್ಯಾರ್ಥಿಗಳ ಶಿಕ್ಷಣದ ಕಥೆ ಏನು..? ಎಂಬುದರ ಬಗ್ಗೆ ಸ್ವಲ್ಪವೂ ಯೋಚನೆ ಮಾಡದೇ ಧರಣಿಕೋರರು ಧರಣಿಗೆ ಇಳಿದಿದ್ದಾರೆ.
ಶಿಕ್ಷಕರ ಮೇಲೆ ನಡೆದ ದೌರ್ಜನ್ಯವನ್ನು ಮರೆಮಾಚಿ ಕೇವಲ ಈ ಪ್ರಕರಣದಲ್ಲಿ ಶಿಕ್ಷಕರು ಮಾತ್ರ ಆರೋಪಿಗಳು ಎಂದು ಬಿಂಬಿಸಿ, ಕೊನೆಗೆ ಪ್ರಾಂಶುಪಾಲರಿಂದಲೇ ವಿದ್ಯಾರ್ಥಿಗಳಿಗೆ ಕ್ಷಮೆ ಕೇಳಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಂಡ ರಾಜಕೀಯ ನಾಯಕರಲ್ಲಿ ಓರ್ವರು ಈ ಮೊದಲು ಉಪನ್ಯಾಸರಾಗಿದ್ದರೂ ಎಂಬುದು ಇಲ್ಲಿ ಸೊಜುಗದ ಸಂಗತಿಯಾಗಿದೆ.
ಈ ಪ್ರಕರಣವನ್ನು ಕುಲಂಕುಶವಾಗಿ ಗಮನಿಸಿದ ಜಿಲ್ಲೆಯ ಸುಶಿಕ್ಷಿತರ ಪ್ರಕಾರ ಈ ರಾಜಕೀಯ ನಾಯಕರು, ತಮ್ಮ ಜನಪ್ರೀಯತೆಯ ತೆವಲಿಗಾಗಿ, ಕೆಲ ವಿದ್ಯಾರ್ಥಿಗಳಿಂದ ಬರುವ ನಾಲ್ಕಣೆಯ ಜಯಘೋಷಕ್ಕಾಗಿ ಯಾವ ಮಟ್ಟಿಗಾದರೂ ಇಳಿಯುತ್ತಾರೆ. ಒಂದೊಮ್ಮೆ ಆರು ಜನ ಸಿಬ್ಬಂದಿಗಳು ಅರೆಸ್ಟ್ ಆಗಿ ಸಸ್ಪೆಂಡ್ ಆದರೆ ಕಲಾ ವಿದ್ಯಾರ್ಥಿಗಳಿಗೂ ವಾಣಿಜ್ಯಶಾಸ್ತ್ರ ಪಾಠ ಮಾಡುತ್ತಾರೆಯೆ ಎಂಬ ಅಭಿಪ್ರಾಯ ಕೇಳಿಬಂದಿದೆ.
