ಕಾರವಾರ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹೊರಡಿಸಿರುವ ಶಾಶ್ವತ ನಿವಾಸಿ‌ ಪ್ರಮಾಣ ಪತ್ರ (Permanent Residence Certificate) ಅಧಿಸೂಚನೆ ಭಾರತೀಯ ಜನತಾ ಪಾರ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ, ರಾಷ್ಟ್ರೀಯ ಭದ್ರತಾ ಆತಂಕಕ್ಕೆ ಕಾರಣವಾಗುವ ಈ ಅಧಿಸೂಚನೆಯನ್ನು ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ, ಉಡುಪಿ ಶಾಸಕ ಯಶಪಾಲ ಸುವರ್ಣ, ಇದರಲ್ಲಿ ಬಾಂಗ್ಲಾದೇಶಿಯರು ಸೇರಿದಂತೆ ಅಕ್ರಮ ನುಸುಳುಕೋರರ ವಾಸ್ತವ್ಯವನ್ನು ಸಕ್ರಮಗೊಳಿಸುವ ರಾಜ್ಯ ಸರ್ಕಾರದ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಹೊರಡಿಸಿರುವ ಶಾಶ್ವತ ನಿವಾಸ ಪ್ರಮಾಣಪತ್ರ- 2026 ಅಧಿಸೂಚನೆ ಗಂಭೀರ ಸಾಂವಿಧಾನಿಕ, ಕಾನೂನು ಮತ್ತು ರಾಷ್ಟ್ರೀಯ ಭದ್ರತಾ ಆತಂಕಗಳನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ತನ್ನ ಮುಸ್ಲಿಂ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಕುತಂತ್ರ ಅಡಗಿದೆ. ಆಡಳಿತ ವೈಫಲ್ಯ, ಅಡಳಿತ ವಿರೋಧಿ ಅಲೆಯಿಂದ ನಲುಗುತ್ತಿರುವ ಕಾಂಗ್ರೆಸ್ ಸರ್ಕಾರ, ಮುಂದಿನ ಚುನಾವಣೆಯಲ್ಲಿ ನುಸುಳುಕೋರರ ಮತ ಪಡೆದು ಗೆಲ್ಲುವ ತಂತ್ರಗಾರಿಕೆ ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಪಶ್ಚಿಮ ಬಂಗಾಲದಿಂದ ಹೊರದಬ್ಬಲಾಗುತ್ತಿರುವ ಲಕ್ಷಾಂತರ ಮಂದಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರರು ಕರ್ನಾಟಕಕ್ಕೆ ಬಂದಿದ್ದಾರೆಂಬ ಮಾಹಿತಿ ಇದೆ. ಈ ಪ್ರಮಾಣಪತ್ರದಿಂದ ರಾಜ್ಯದ ಜನತೆಗೆ ತೊಂದರೆ ಆಗಲಿದೆ. ಈ ಕಾಯಿದೆಯಿಂದ ಅಕ್ರಮ ನುಸುಳುಕೋರರಿಗೆ ನೀರು, ಆಹಾರ, ಪಡಿತರ ಚೀಟಿ ಸವಲತ್ತುಗಳು ಸೇರಿದಂತೆ ಸರ್ಕಾರದ ಸವಲತ್ತುಗಳು ದೊರೆಯಲಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಪರಾಧ ಪ್ರಮಾಣವೂ ಹೆಚ್ಚುವ ಭೀತಿ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಮಾತನಾಡಿ, ಭಾರತದ ಸಂವಿಧಾನವು ದೇಶಾದ್ಯಂತ ಎಲ್ಲಾ ನಾಗರಿಕರಿಗೆ ಒಂದೇ ಪೌರತ್ವವನ್ನು ಕಲ್ಪಿಸುತ್ತದೆ. ಆದರೆ, ಕರ್ನಾಟಕ ಸರ್ಕಾರವು ‘ಶಾಶ್ವತ ನಿವಾಸ ಪ್ರಮಾಣಪತ್ರ’ ವನ್ನು ನೀಡುವುದು ಈ ಸಾಂವಿಧಾನಿಕ ಚೌಕಟ್ಟಿಗೆ ವಿರುದ್ಧವಾಗಿದೆ. ಇದು ಸಂವಿಧಾನದ 14 ನೇ ವಿಧಿಯನ್ನು ಉಲ್ಲಂಘನೆ ಎಂದರು.

ಪೌರತ್ವ, ವಿದೇಶಿಯರು, ವಲಸೆ ಮತ್ತು ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳು ಸಂವಿಧಾನದ ಅಡಿಯಲ್ಲಿ ಕೇಂದ್ರ ಸರ್ಕಾರದ ವಿಶೇಷ ಅಧಿಕಾರ ವ್ಯಾಪ್ತಿಯಡಿ ಬರುತ್ತವೆ. ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಯ ರಾಜ್ಯ ಮಟ್ಟದ ಕಾರ್ಯವಿಧಾನವು ಕೇಂದ್ರದ ಏಕರೂಪದ ಚೌಕಟ್ಟನ್ನು ದುರ್ಬಲಗೊಳಿಸಲಿದೆ. ಸರಿಯಾದ ಪೌರತ್ವ ಪರಿಶೀಲನೆಯಿಲ್ಲದೆ ಅಂತಹ ಪ್ರಮಾಣಪತ್ರ ನೀಡುವುದರಿಂದ ಅಕ್ರಮ ವಲಸಿಗರು ರಾಜ್ಯಗಳಲ್ಲಿ ನೆಲೆಸಿ ಅಕ್ರಮ ಚಟುವಟಿಕೆಗಳಲ್ಲೂ ತೊಡಗುವ ಸಾಧ್ಯತೆ ಇದೆ. ಆದ್ದರಿಂದ ರಾಜ್ಯಪಾಲರು ಹಾಗೂ ಕೇಂದ್ರ ಗೃಹ ಸಚಿವಾಲಯವು ಈ ಪ್ರಮಾಣಪತ್ರ ವಿತರಿಸದಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದರು.

ವೇದಿಕೆಯಲ್ಲಿ ಮಾಜಿ ಶಾಸಕ ಸುನೀಲ್ ಹೆಗಡೆ, ಈಶ್ವರ ನಾಯ್ಕ ಸೇರಿದಂತೆ ಹಲವರು ಇದ್ದರು.