Karwar| ತಾಲೂಕಿನಲ್ಲಿ ಅಕ್ರಮವಾಗಿ ಕಾಳಿ ನದಿಯಿಂದ ಉಸುಕು ಬಗೆದು ಗೋವಾಕ್ಕೆ ಸಾಗಿಸುವ ‘ಸ್ಯಾಂಡ್ ಸಿಂಡಿಕೇಟ್’ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಈ ಸಿಂಡಿಕೇಟ್ ಕೆಲವರಿಗೆ ಅಕ್ಷಯ ಪಾತ್ರೆಯಂತಾಗಿದೆ.
ತಾಲೂಕಿನ ಹಣಕೋಣ ಗ್ರಾಮದಲ್ಲೂ ಕಾಳಿ ನದಿಯಿಂದ ಅಕ್ರಮವಾಗಿ ಉಸುಕು ತೆಗೆಯುವ ಹಾಗೂ ಗೋವಾ ರಾಜ್ಯಕ್ಕೆ ಸಾಗಿಸುವ ಚಟುವಟಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂಬ ಆರೋಪಗಳು ಕೇಳಿಬಂದಿವೆ.
ಸ್ಥಳೀಯರ ಮಾಹಿತಿ ಪ್ರಕಾರ, ಪ್ರತಿದಿನ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3 ಗಂಟೆಯವರೆಗೆ ಅಕ್ರಮ ಉಸುಕು ಸಾಗಾಟ ನಡೆಯುತ್ತಿದ್ದು, ಕಾಳಿ ನದಿಯಿಂದ ನಿಯಮಬಾಹೀರವಾಗಿ ಉಸುಕು ತೆಗೆಯಲಾಗುತ್ತಿದೆ. ಬಳಿಕ ಲಾರಿಗಳು ಹಾಗೂ ಇತರ ವಾಹನಗಳ ಮೂಲಕ ಗೋವಾಕ್ಕೆ ಸಾಗಿಸಲಾಗುತ್ತಿದೆ ಎನ್ನಲಾಗಿದೆ.
ರಾತ್ರಿಯಿಡೀ ಉಸುಕು ತುಂಬಿದ ವಾಹನಗಳ ಓಡಾಟದಿಂದ ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಾತ್ರಿಯಿಡಿ ವಾಹನಗಳ ಓಡಾಟದ ಶಬ್ದಗಳಿಂದ ಗ್ರಾಮಸ್ಥರಿಗೆ ನಿದ್ದೆಯಿಲ್ಲದಂತಾಗಿದೆ.
ಆದರೆ ಅಧಿಕಾರಿಗಳು ಮಾತ್ರ ಕೆಲ ಆಯ್ದ ವಾಹನಗಳನ್ನು ಮಾತ್ರ ತಡೆದು ದಂಡ ವಿಧಿಸುವ ಮೂಲಕ ಕಾಟಾಚಾರಕ್ಕೆ ದಾಳಿ ನಡೆಸುವಲ್ಲಿ ಮಾತ್ರ ಸೀಮಿತವಾಗಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.
ಈ ವಿಚಾರದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ನಡುವೆ ಸಮನ್ವಯದ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಗಣಿ ಇಲಾಖೆಗೆ ಮಾಹಿತಿ ನೀಡದೇ ಕೆಲ ಅಕ್ರಮ ಉಸುಕು ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಂತರ ಪ್ರಕರಣದಲ್ಲಿ ಹೆಚ್ಚಿನ ಕ್ರಮ ಕೈಗೊಳ್ಳದೆ ಮೌನ ವಹಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಮಾಜಾಳಿ ತನಿಖಾ ಠಾಣೆ ವ್ಯಾಪ್ತಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಅಳವಡಿಸಿದ್ದರೂ ಅಕ್ರಮ ಉಸುಕು ಸಾಗಾಟ ನಿರಂತರವಾಗಿ ನಡೆಯುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಪ್ರತಿದಿನ ಸುಮಾರು 30 ರಿಂದ 40 ವಾಹನಗಳು ಗೋವಾಕ್ಕೆ ಉಸುಕು ಸಾಗಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲಾಖೆಗಳ ಕೆಲ ಅಧಿಕಾರಿಗಳ ಒಳ ಒಪ್ಪಂದದಿಂದಲೇ ಈ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ನಡೆಯುತ್ತಿವೆ ಎಂಬುದು ಸಾರ್ವಜನಿಕರ ದೂರಾಗಿದೆ.
ಸ್ಯಾಂಡ್ ಸಿಂಡಿಕೇಟ್ ಮೆಂಬರ್ ಇಲ್ಲದ “ಫಿಕ್ಸ್” ಆಗದ ಅಡ್ಡೆಗಳ ಮೇಲೆ ಮಾತ್ರ ಪೊಲೀಸರು ದಾಳಿ ನಡೆಸಿ, ಉಳಿದ ಕಡೆಗಳಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ಕೆಲ ಸ್ಥಳೀಯರ ಪ್ರಕಾರ ಕಾರವಾರದಲ್ಲಿ ಅಕ್ರಮ ಸ್ಯಾಂಡ್ ಸಿಂಡಿಕೇಟ್ ತೆಯೆತ್ತಿದೆ ಎನ್ನಲಾಗುತ್ತಿದೆ. ಈ ಸಿಂಡಿಕೇಟ್ ನ ಸದಸ್ಯರು ಪ್ರತಿ ತಿಂಗಳು ಒಂದು ವಾಹನಕ್ಕೆ 20 ಸಾವಿರ ನೀಡಬೇಕು. ಒಂದು ತಿಂಗಳಿಗೆ ಈ ಸಿಂಡಿಕೇಟ್ ಗೆ 4 ರಿಂದ 6 ಲಕ್ಷ ಹಣ ಕ್ರೋಡಿಕರಣ ಆಗುತ್ತಿದೆ. ಈ ಹಣವನ್ನು ಕಾರವಾರದಿಂದ ಗೋವಾ ಸಾಗಿಸಲು ಯಾವುದೇ ತೊಂದರೆ ಆಗದಂತೆ ಕೆಲ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಸಂದಾಯ ಮಾಡಲಾಗುತ್ತದೆ ಎಂಬ ಆರೋಪವೂ ಕೇಳಿಬಂದಿದೆ.
ಆದರೆ, ಈ ಆರೋಪಗಳ ಕುರಿತು ಸಂಬಂಧಿಸಿದ ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನಷ್ಟೇ ಲಭ್ಯವಾಗಬೇಕಿದೆ.
