Karwar| ಇಲ್ಲಿನ ಶೇಜವಾಡಾದಲ್ಲಿ ಶೆಜ್ಜೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡಿ ನೂತನ ದೇವಸ್ಥಾನ ನಿರ್ಮಾಣ ಸ್ವಾಗತಾರ್ಹ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ‌ ರೂಪಾಲಿ ನಾಯ್ಕ ಹೇಳಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೃಂಗೇರಿ ಗುರುಗಳಾದ ವಿಧುಶೇಖರ‌ ಭಾರತೀ ಸ್ವಾಮಿಗಳ ಕೈಯಲ್ಲಿ ನೂತನ ದೇವಸ್ಥಾನದ ಶಿಲಾನ್ಯಾಸ ನಡೆಯುತ್ತಿದೆ.  ಗುರುಗಳ ಅನುಗ್ರಹದಿಂದ ದೇವಸ್ಥಾನದ ನಿರ್ಮಾಣ ಕಾರ್ಯ ತ್ವರಿತವಾಗಿ ಪೂರ್ಣಗೊಂಡು ಭಕ್ತರ ದರ್ಶನಕ್ಕೆ ದೊರೆಯಲಿ ಎಂದರು.

ಇನ್ನು ತಮ್ಮ ಅವಧಿಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿನ ಹಲವು ದೇವಾಲಯಗಳಿಗೆ ಮುಜರಾಯಿ ಇಲಾಖೆಯಿಂದ ಸಾಕಷ್ಟು ಅನುದಾನ ಹಂಚಿಕೆ ಮಾಡಿದ್ದನ್ನು ಸ್ಮರಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮುಜರಾಯಿ ಇಲಾಖೆಗೆ ಅತೀ ಹೆಚ್ಚಿನ ಅನುದಾನ ನೀಡಲಾಗಿತ್ತು. ಈ ಅವಧಿಯಲ್ಲಿ ಒಂದು ಕೋಟಿ ರೂ. ಅನುದಾನವನ್ನು ಶೇಜವಾಡಾದ ಶೇಜ್ಜೇಶ್ವರ ದೇವಸ್ಥಾನಕ್ಕೆ ನೀಡಿ, ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಕೆಯಾಗುವಂತೆ ಮಾಡಲಾಗಿತ್ತು ಎಂಬುದನ್ನು ಈ ಸಂದರ್ಭದಲ್ಲಿ ರೂಪಾಲಿ ನಾಯ್ಕ ಸ್ಮರಿಸಿದರು.