Karwar| ರಸ್ತೆ ಪಕ್ಕದ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ, ಸುಮಾರು ನಾಲ್ಕೈದು ವಿದ್ಯುತ್ ಕಂಬಗಳು ನೆಲಕ್ಕುರಳಿ, ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಕಾರವಾರ ತಾಲೂಕಿನ ಬೊಳ್ವೆ ಗ್ರಾಮದಲ್ಲಿ ನಡೆದಿದೆ.

ರವಿವಾರ ಬೆಳಗ್ಗೆ ಬೀಸಿದ ಭಾರಿ ಗಾಳಿಗೆ ಮಲ್ಲಾಪುರ-ಕೆರವಡಿ ನಡುವಿನ ಬೊಳ್ವೆ ಗ್ರಾಮದ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮಾವಿನ ಮರವೊಂದು ಏಕಾಏಕಿ ಬಿದ್ದಿದೆ. ಪರಿಣಾಮ ಸುಮಾರು ನಾಲ್ಕೈದು ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. ವಿದ್ಯುತ್ ತಂತಿಗಳು ರಸ್ತೆಯ ಮೇಲೆ ಚಲ್ಲಾಪಿಲ್ಲಿಯಾಗಿ ಬಿದ್ದಿದೆ. ಪರಿಣಾಮ ರಸ್ತೆಯಲ್ಲಿನ ಓಡಾಟಕ್ಕೆ ತೊಂದರೆಯಾಯಿತು. ಸ್ಥಳಕ್ಕೆ ಸ್ಥಳೀಯರು ಹಾಗೂ ಹೆಸ್ಕಾಂ ಸಿಬ್ಬಂದಿಗಳು ಆಗಮಿಸಿ ಬಿದ್ದ ಮರ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ.


