Kaiga project|BJP State Voice President and Ex MLA Roopali Naik demands employment for locals|Karwar| ಇಲ್ಲಿನ ಕೈಗಾ ಅಣು ವಿದ್ಯುತ್ ಯೋಜನೆಯಲ್ಲಿ 5 ಮತ್ತು 6ನೇ ಘಟಕ ನಿರ್ಮಾಣ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ದೊರೆತಿದ್ದು, ಯೋಜನೆಯಲ್ಲಿ ಕೈಗಾ ನಿರಾಶ್ರಿತರ ಕುಟುಂಬದವರು ಹಾಗೂ ಸ್ಥಳೀಯರಿಗೆ ಉದ್ಯೋಗ ಹಾಗೂ ಸ್ಥಳೀಯರಿಗೆ ಸೂಕ್ತ ಮೂಲಭೂತ ಸೌಲಭ್ಯ ದೊರಕಿಸಿಕೊಡಬೇಕೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕೈಗಾ ಅಣು ವಿದ್ಯುತ್ ಯೋಜನೆ ಮುಖ್ಯಸ್ಥರನ್ನು ಆಗ್ರಹಿಸಿದ್ದಾರೆ.
ಕೈಗಾ ಅಣು ವಿದ್ಯುತ್ ಯೋಜನೆಗೆ ನಮ್ಮ ನೆಲ, ಜಲ ಬಳಕೆಯಾಗಿದೆ. ನಮ್ಮವರೇ ನಿರಾಶ್ರಿತರಾಗಿದ್ದಾರೆ. ಹಾಗಿರುವಾಗ ಉದ್ಯೋಗ ನೀಡಿಕೆಯಲ್ಲಿ, ಸೌಲಭ್ಯಗಳನ್ನು ಕಲ್ಪಿಸಬೇಕಾದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ನಿರಾಶ್ರಿತರು ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆತಲ್ಲಿ ಅವರ ಜೀವನಮಟ್ಟ ಸುಧಾರಣೆಯಾಗಲಿದೆ ಎಂದಿದ್ದಾರೆ.
ಇನ್ನು ನಮ್ಮ ಯುವಕರು ಸ್ಥಳೀಯವಾಗಿ ಉದ್ಯೋಗ ಇಲ್ಲದೆ ಬೇರೆ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇವರಿಗೆ ಸ್ಥಳೀಯವಾಗಿ ಉದ್ಯೋಗ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಕೈಗಾವಾಡ ನಿರಾಶ್ರಿತ ಕೇಂದ್ರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕು. ಕೈಗಾದ ಕಾರ್ಮಿಕರು ಹಾಗೂ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವಂತೆ ಅವರು ಆಗ್ರಹಿಸಿದ್ದಾರೆ.
ಅದೇ ರೀತಿ ಬಿಣಗಾದ ಗ್ರಾಸಿಂ ಇಂಡಸ್ಟ್ರಿಯಲ್ಲೂ ಸ್ಥಳೀಯರಿಗೆ ಉದ್ಯೋಗ ನೀಡಿಕೆಯಲ್ಲಿ ಆದ್ಯತೆ ನೀಡಬೇಕೆಂದು ಗ್ರಾಸಿಂ ಇಂಡಸ್ಟ್ರಿ ಮುಖ್ಯಸ್ಥರನ್ನು ಆಗ್ರಹಿಸುವುದಾಗಿ ರೂಪಾಲಿ ಎಸ್.ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
