Karwar | ನಗರದ ಪುಟಪಾತ್‌ಗಳನ್ನು ಅತಿಕ್ರಮಿಸಿ ನಿರ್ಮಿಸಲಾಗಿರುವ ಅಂಗಡಿಗಳು ಹಾಗೂ ವ್ಯಾಪಾರ ಚಟುವಟಿಕೆಗಳನ್ನು ತೆರವುಗೊಳಿಸುವ ‘ಆಪರೇಷನ್ ಪುಟಪಾತ್’ ಕಾರ್ಯಾಚರಣೆಯನ್ನು ಸದ್ಯದಲ್ಲೇ ಕಾರವಾರ ನಗರಸಭೆ ಆರಂಭಿಸಲಿದೆ.
ನಗರದಲ್ಲಿ ಪುಟಪಾತ್‌ಗಳ ಮೇಲೆ ವ್ಯಾಪಾರ ನಡೆಸುತ್ತಿರುವುದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ಜೊತೆಗೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅತಿಕ್ರಮಣ ತೆರವು ಅನಿವಾರ್ಯವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಲ್ಲದೇ ಕಾರವಾರವು ಜಿಲ್ಲಾಕೇಂದ್ರ ಸಹ ಆಗಿರುವುದರಿಂದ ಜೊತೆಗೆ ಕೈಗಾ ಹಾಗೂ ಸೀಬರ್ಡ್ ನೌಕಾನೆಲೆಯಂತಹ ರಾಷ್ಟ್ರೀಯ ಮಹತ್ವದ ಯೋಜನೆಗಳನ್ನು ಹೊಂದಿರುವ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಮೂಲಸೌಕರ್ಯ ಹಾಗೂ ಸಂಚಾರ ವ್ಯವಸ್ಥೆಯನ್ನು ಸುಗಮವಾಗಿಡಲು ಪುಟಪಾತ್ ಅತಿಕ್ರಮಣವನ್ನು ಕಟ್ಟುನಿಟ್ಟಾಗಿ ತೆರವುಗೊಳಿಸುವಂತೆ ನಗರಸಭೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಡುವೆ, ಬೆಂಗಳೂರಿನಲ್ಲಿ ಪುಟಪಾತ್ ಅತಿಕ್ರಮಣ ತೆರವಿಗೆ ಸಂಬಂಧಿಸಿ ಸಂಬಂಧಿತ ಅಧಿಕಾರಿಗಳು ಕೈಗೊಂಡಿರುವ ಕ್ರಮವನ್ನು ಸಹ ಉಲ್ಲೇಖಿಸಿ ನಗರಸಭೆ ಆಯುಕ್ತರಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಫೋನ್ ಬಂದ್ ಇಡೋಣ: ಪುಟಪಾತ್ ತೆರವಿಗೆ ನಗರಸಭೆ ಮುಂದಾದ ದಿನ ಅಂಗಡಿಕಾರರ ಫೋನ್ ಕಾಲ್ ಗಳು ಬರಬಹುದು. ಆಗ ಜನಪ್ರತಿನಿಧಿಗಳು ಏನು ಮಾಡೋಣ ಎಂಬ ಬಗ್ಗೆಯೂ ಚರ್ಚೆ ನಡೆದು, ಕೊನೆಗೆ ಫೋನ್ ಸ್ವಿಚ್ ಆಫ್ ಮಾಡಿಡೋಣ ಎಂಬ ಪ್ಲ್ಯಾನ್ ಸಹ ಮಾಡಲಾಗಿದೆಯಂತೆ.
ಒಟ್ಟಾರೆ, ಸದ್ಯದಲ್ಲೇ ಕಾರವಾರ ವ್ಯಾಪ್ತಿಯಲ್ಲಿ ನಗರಸಭೆಯಿಂದ ‘ಆಪರೇಷನ್ ಪುಟಪಾತ್’ ಕಾರ್ಯಾಚರಣೆ ಆರಂಭವಾಗಲಿದೆ ಎಂದು ನಗರಸಭೆ ಮೂಲಗಳು ಖಚಿತಪಡಿಸಿವೆ.
