ಕಾರವಾರ: ತಾಲೂಕಿನ ಮುದಗಾ ಸಮೀಪದ ರೈಲು ಟನೆಲ್ ಬಳಿ ಎರಡು ಕಡವೆಗಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಮೃತ ಪ್ರಾಣಿಗಳ ಕಾಲುಗಳನ್ನು ಕತ್ತರಿಸಿ ಮಾಂಸ ಕದ್ದೊಯ್ಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣವು ರೈಲು ಅಪಘಾತವೇ ಅಥವಾ ವನ್ಯಜೀವಿ ಕಳ್ಳಬೇಟೆಗೆ ಸಂಬಂಧಿಸಿದದ್ದೇ ಎಂಬ ಎರಡು ಆಯಾಮಗಳಲ್ಲಿ ಅರಣ್ಯ ಇಲಾಖೆ ತನಿಖೆ ಆರಂಭಿಸಿದೆ.

ಮೃತಪಟ್ಟಿರುವವು ಸುಮಾರು 6ರಿಂದ 7 ವರ್ಷದ ಹೆಣ್ಣು ಹಾಗೂ ಗಂಡು ಕಡವೆಗಳೆಂದು ಅಂದಾಜಿಸಲಾಗಿದೆ. ಘಟನೆ ಮಂಗಳವಾರ ತಡರಾತ್ರಿ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಬುಧವಾರ ಬೆಳಿಗ್ಗೆ ಸ್ಥಳೀಯರ ಗಮನಕ್ಕೆ ಬಂದಿದೆ. ರೈಲು ಹಳಿಯ ಪಕ್ಕದಲ್ಲೇ ಕಡವೆಗಳ ಮೃತದೇಹಗಳು ಪತ್ತೆಯಾಗಿದ್ದು, ಬಳಿಕ ಅವುಗಳ ಕಾಲುಗಳನ್ನು ಕತ್ತರಿಸಿ ಮಾಂಸ ಕದ್ದೊಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆರ್‌ಎಫ್‌ಓ ಕಿರಣ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಮುದಗಾ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಕಡವೆಗಳ ಮಾಂಸ ಕದ್ದೊಯ್ದ ಆರೋಪದ ಮೇರೆಗೆ ಪ್ರಕರಣ ದಾಖಲಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ಈ ಘಟನೆ ವನ್ಯಜೀವಿಗಳ ಸುರಕ್ಷತೆ ಕುರಿತಾಗಿ ಮತ್ತೆ ಆತಂಕ ಮೂಡಿಸಿದ್ದು, ರೈಲು ಹಳಿಗಳ ಸಮೀಪದ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳ ಸಂಚಾರದ ಮೇಲ್ವಿಚಾರಣೆ ಹಾಗೂ ಕಳ್ಳಬೇಟೆ ತಡೆಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ಪ್ರಕರಣದ ನಿಖರ ಕಾರಣ ತಿಳಿಯಲು ಅರಣ್ಯ ಇಲಾಖೆ ತನಿಖೆ ಮುಂದುವರಿಸಿದೆ.