ಕಾರವಾರ | ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಡಾಂಬರ್ ಕಳ್ಳತನ ಮಾಡುವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. 

ಗಲ್ಫ್ ದೇಶಗಳಿಂದ ಕಾರವಾರ ಬಂದರಿಗೆ ಬರುವ ಬಿಟುಮಿನ್ (ಡಾಂಬರು) ಅನ್ನು ಭಾರತದ ಮೂಲೆ ಮೂಲೆಗಳಿಗೆ ಸಾಗಿಸಲಾಗುತ್ತದೆ. ಹೀಗೆ ಸಾಗಾಟ ಮಾಡುವ ಸಂದರ್ಭದಲ್ಲೇ ಕೆಲ ದಂಧೆಕೋರರು ಡಾಂಬರ್ ಟ್ಯಾಂಕರ್ ಗಳ ಚಾಲಕರಿಗೆ ಹಣದ ಆಮೀಷವೊಡ್ಡಿ ಡಾಂಬರ್ ಕಳ್ಳತನ ಮಾಡುತ್ತಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.

 ನಿರ್ಜನ ಪ್ರದೇಶದಲ್ಲಿ ಸುಸಜ್ಜಿತ ಅಡ್ಡೆ ಮಾಡಿಕೊಂಡಿರುವ ಈ ಡಾಂಬರ್ ಕಳ್ಳರು ಡಾಂಬರ್ ಟ್ಯಾಂಕರ್ ಪಕ್ಕ ಬೆಂಕಿ ಹಚ್ಚಿ ಗಟ್ಟಿಯಾದ ಡಾಂಬರ್ ಅನ್ನು ದ್ರವರೂಪಕ್ಕೆ ಪರಿವರ್ತಿಸಿ ಒಂದೊಂದು ಟ್ಯಾಂಕರ್ ನಿಂದ ನಿರ್ದಿಷ್ಟ ಪ್ರಮಾಣದ ಡಾಂಬರ್ ಅನ್ನು ತೆಗೆಯುತ್ತಾರೆ‌.

ಹೀಗೆ ಟ್ಯಾಂಕರ್ ನಿಂದ ಕದ್ದ ಡಾಂಬರ್ ಗಳನ್ನು ಕೆಲ ಸ್ಥಳೀಯ ಮತ್ತು ಹೊರ ರಾಜ್ಯದ ಗುತ್ತಿಗೆದಾರರಿಗೆ ಅಕ್ರಮವಾಗಿ ಮಾರಾಟ ಮಾಡುತ್ತಾರೆ. ಈ ಡಾಂಬರ್ ಕಳ್ಳತನ‌ದ ದಂಧೆ ಅಂಕೋಲಾ ತಾಲೂಕಿನಲ್ಲಿ ಹೆಚ್ಚಾಗಿ ನಡೆಯುತ್ತಿದೆ. ದುರಂತ ಏನೆಂದರೆ ಈ ಅಕ್ರಮ ದಂಧೆ ಕದ್ದು ಮುಚ್ಚಿ ನಡೆಯುತ್ತಿಲ್ಲ. ಬದಲಾಗಿ ರಾಜಾರೋಷವಾಗಿ ಹಾಡುಹಗಲೇ ನಡೆಯುತ್ತಿದೆ.

ಅಂಕೋಲಾ ತಾಲೂಕೊಂದರಲ್ಲೇ ಮೂರಕ್ಕೂ ಹೆಚ್ಚು ಡಾಂಬರ್ ಕಳ್ಳತನ ಮಾಡುವ ಅಡ್ಡೆಗಳಿವೆ ಎಂದು ತಿಳಿದುಬಂದಿದೆ. ಅವೈಜ್ಞಾನಿಕವಾಗಿ ಡಾಂಬರ್ ಟ್ಯಾಂಕರ್ ಗೆ ಬೆಂಕಿ ಹಾಕಿ ಕಳ್ಳತನ ಮಾಡುವುದು ತುಂಬಾ ಅಪಾಯಕಾರಿ ಕೆಲಸವಾಗಿದೆ. ಒಂದೊಂಮ್ಮೆ ಡಾಂಬರ್ ಟ್ಯಾಂಕರ್ ಸ್ಪೋಟವಾದಲ್ಲಿ ಅಡ್ಡೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ಸುತ್ತಮುತ್ತಲಿನ‌ ಸ್ಥಳೀಯರ ಜೀವಕ್ಕೆ ಅಪಾಯವಿದೆ.

ಇನ್ನೂ ಕೆಲ ಡಾಂಬರ್ ಕಳ್ಳರ ಅಡ್ಡೆ ಜನವಸತಿ ಪ್ರದೇಶ ಮತ್ತು ಶಾಲೆಯ ಅಕ್ಕ ಪಕ್ಕದಲ್ಲಿಯೇ ಇದೆ. ಧನಬಲ ಮತ್ತು ತೋಳ್ಬಲ ಇರುವವರೇ ಈ ದಂಧೆಯಲ್ಲಿ ಇರುವ ಕಾರಣ ಸ್ಥಳೀಯರು ದೂರು ನೀಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಈ ಡಾಂಬರ್ ಕಳ್ಳರು ಸದಾ ಜನಪತ್ರಿನಿಧಿಗಳು ಹಾಗೂ ಅಧಿಕಾರಿಗಳ ಸುತ್ತ ಕ್ಷುದ್ರಗ್ರಹದಂತೆ ಗಿರಕಿ ಹೊಡೆಯುವ ಪರಿಣಾಮ ಬಲಹೀನರಾದ ಸ್ಥಳೀಯರು ದೂರು ನೀಡಲು ಮುಂದಾಗುತ್ತಿಲ್ಲ.

ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸ್ವರ್ಣಲೇಪಿತರ ಕೈಕುಲುಕುವ ಬದಲು ಅವರ ಕೈಗೆ ಲೋಹದ ಬಳೆ ಹಾಕಲಿದ್ದಾರಾ ಎಂಬುದು ಕಾದು ನೋಡಬೇಕಿದೆ.