ಉಡುಪಿ : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಿದ ಬಳಿಕ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಸರಕಾರಿ ಬಸ್ ಪಾಸ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಸರಕಾರದ ಈ ಯೋಜನೆಗೆ ತಾಂತ್ರಿಕ ಸಮಸ್ಯೆಗಳು ಅಡ್ಡಿಯಾಗಿದ್ದು, ಬಸ್ ಪಾಸ್‌ಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ.
ರಾಜ್ಯದ ಸಿಎಂ ಯೋಜನೆ ಘೋಷಣೆ ಮಾಡಿದ ಬಳಿಕ ಸೇವಾಸಿಂಧು ಪೋರ್ಟಲ್ ಮೂಲಕ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್‌ಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ನಡೆಸುತ್ತಿದ್ದಾರೆ. ಆಧಾರ್ ಕಾರ್ಡ್, ಶಾಲೆ ಅಥವಾ ಕಾಲೇಜುಗಳ ಶುಲ್ಕ ಪಾವತಿಸಿದ ರಶೀದಿ ಹಾಗೂ ಫೋಟೊಗಳನ್ನು ಕೊಂಡೊಯ್ದು ಸೈಬರ್‌ಗಳಲ್ಲಿ ವಿದ್ಯಾರ್ಥಿಗಳು ಪಾಸ್‌ಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅದರೆ, ವಿದ್ಯಾರ್ಥಿಗಳಿಗೆ ತಾಂತ್ರಿಕ ಸಮಸ್ಯೆ ಅಡ್ಡಿಯಾಗುತ್ತಿದೆ.
ಸರ್ವರ್, ಒಟಿಪಿ ಸಮಸ್ಯೆ:
ಅರ್ಜಿ ಸಲ್ಲಿಕೆಗೆ ಒಂದೆಡೆ ಪದೇ ಪದೇ ಸರ್ವರ್ ಸಮಸ್ಯೆ ಎದುರಾದರೆ, ಮತ್ತೊಂದೆಡೆ ಸೇವಾ ಸಿಂಧು ಪೋರ್ಟಲ್ ಒಟಿಪಿ ಬರುತ್ತಿಲ್ಲ. ಆಧಾರ್ ನಂಬರ್ ದಾಖಲಿಸಿದ ಬಳಿಕ ವಿದ್ಯಾರ್ಥಿಗಳ ಅಥವಾ ಅವರ ಪೋಷಕರ ಮೊಬೈಲ್ ನಂಬರ್‌ಗೆ ಮೊದಲು ಆಧಾರ್ ಒಟಿಪಿ ಬಂದ ಬಳಿಕ ಸೇವಾ ಸಿಂಧು ಒಟಿಪಿ ಬರಬೇಕಾಗುತ್ತದೆ. ಆದರೆ, ಸೇವಾ ಸಿಂಧು ಒಟಿಪಿ ಬಾರದ ಕಾರಣ ವಿದ್ಯಾರ್ಥಿಗಳಿಗೆ ಪಾಸ್‌ಗಾಗಿ ಅರ್ಜಿ ಸಲ್ಲಿಸಲಾಗದೇ ದಿನಾ ದಿನಾ ಸೈಬರ್‌ಗೆ ಹಣ ವ್ಯಯಿಸಬೇಕಾದ ಸ್ಥಿತಿ ಎದುರಾಗಿದೆ.
ರೂಟ್ ಸಮಸ್ಯೆ:
ಗ್ರಾಮೀಣ ಭಾಗಗಳ ಶಾಲೆ ಅಥವಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸರಿಯಾದ ರೂಟ್ ತೋರಿಸದಿರುವುದು ಕೂಡಾ ಸಮಸ್ಯೆಯಾಗಿದೆ. ಇಲ್ಲಿ ಖುದ್ದಾಗಿ ರೂಟ್ ನಮೂದು ಮಾಡುವ ಬದಲು ಆಟೋಮ್ಯಾಟಿಕ್ ಮಾದರಿಯಲ್ಲಿ ತೋರಿಸುವ ರೂಟನ್ನು ಆಯ್ಕೆ ಮಾಡಲು ಆಯ್ಕೆಗಳನ್ನು ತೋರಿಸುತ್ತದೆ. ಆದರೆ, ಈ ಆಟೋಮ್ಯಾಟಿಕ್ ರೂಟ್ ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವು ಶಾಲೆ, ಕಾಲೇಜುಗಳ ನಿಗದಿತ ಸ್ಥಳ ಆಯ್ಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅಯಾ ಪ್ರದೇಶಗಳ ಬಸ್ ನಿಲ್ದಾಣ ಹಾಗೂ ಇತರ ಪ್ರದೇಶಗಳನ್ನು ತೋರಿಸಲಾಗುತ್ತದೆ. ಇದರಿಂದ ರೂಟ್ ಆಯ್ಕೆ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಕಾಲೇಜು ವಿದ್ಯಾರ್ಥಿಗಳು ಹಾಗೂ ಸೈಬರ್ ಮಾಲಕರು ದೂರಿದ್ದಾರೆ.
ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳೋದೇನು ?
ಈ ಬಗ್ಗೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಬಳಿ ಕೇಳಿದಾಗ ರೂಟ್ ಆಟೋಮ್ಯಾಟಿಕ್ ಆಯ್ಕೆ ಇದ್ದದ್ದನ್ನು ಮ್ಯಾನ್ಯುವಲ್ ಮಾಡಲಾಗಿದೆ. ಇದರಿಂದ ರೂಟ್ ನಮೂದು ಮಾಡಬಹುದು. ಒಟಿಪಿ ಹಾಗೂ ಸರ್ವರ್ ಸಮಸ್ಯೆಗಳಂತಹ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
