ಅಕ್ರಮ ಸಂಬಂಧದ ಹಿನ್ನೆಲೆ ಸಿದ್ದಾಪುರದಲ್ಲಿ ನಡೆದ ಕೊಲೆಯ ಆರೋಪಿಗಳಿಗೆ ಸಿದ್ಧಾಪುರದ ಜೆಎಂಎಫ್ಸಿ ನ್ಯಾಯಾಲಯ ಏಳು ಮಂದಿ ಆರೋಪಿಗಳಿಗೆ ಏಳು ದಿನ ನ್ಯಾಯಾಂಗ ಬಂಧನ ವಿಧಿಸಿದೆ.
ಫೆಬ್ರವರಿ 2 ರಂದು ಸಿದ್ದಾಪುರದ ವಸಂತ ಜಟ್ಯಾ ನಾಯ್ಕ (41 ವರ್ಷ) ಎಂಬವರನ್ನು ತಮ್ಮನ ಪತ್ನಿ ಸುಚಿತ್ರಾ ನಾಯ್ಕ ಹಾಗೂ ಸುಚಿತ್ರಾ ತಂದೆ ಲೋಕನಾಥ ನಾಯ್ಕ್, ಜ್ಯೋತಿಣಿ ಕಮಲಾಕರ ಭಟ್, ಆಕಾಶ್, ಫೈಸಲ್, ಮೆಹಫೂಸ್, ಇರ್ಫಾನ್ ಅಮಾನುಲ್ಲಾ ಸೇರಿ ಕೊಲೆ ಮಾಡಿದ್ದರು.
ಈ ಗಲಾಟೆಯಲ್ಲಿ ಸುಚಿತ್ರ ಪತಿ ಮಹೇಶ ಜಟ್ಯಾ ನಾಯ್ಕ (37 ವರ್ಷ) ಹಾಗೂ ನೆರೆಮನೆಯ ಕುಮಾರ್ ನಾರಾಯಣ್ ನಾಯ್ಕ್ (35) ಎಂಬವರಿಗೂ ಗಂಭೀರ ಗಾಯವಾಗಿದ್ದು, ಶಿವಮೊಗ್ಗದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಕುರಿತಂತೆ ಮೃತ ವಸಂತ ನಾಯ್ಕ ಪತ್ನಿ ಸಂಧ್ಯಾ ನಾಯ್ಕ ಸಿದ್ದಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕೊಲೆ ನಡೆದ 24 ಗಂಟೆಯಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದ ಸಿದ್ದಾಪುರ ಪೋಲಿಸರು ಸಿದ್ಧಾಪುರ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಅಕ್ರಮ ಸಂಬಂಧ ಹಿನ್ನೆಲೆಯ ಕೊಲೆ – ಸಿದ್ದಾಪುರದ ಮಹೇಶ ಹಾಗೂ ಸುಜಾತ ಕಳೆದ ಇಪ್ಪತ್ತು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರ ನಡುವೆ ಬಂದ ಕಮಲಾಕರ ಸ್ವಾಮೀಜಿಯಿಂದ ಇವರ ಸಂಸಾರದಲ್ಲಿ ಬಿರುಕು ಮೂಡಿತ್ತು. ಕಳೆದ ಆರು ತಿಂಗಳಿಂದ ಸುಜಾತ ತನ್ನ ಇಬ್ಬರು ಹೆಣ್ಣು ಮಕ್ಕಳ ಜೊತೆಗೆ ಕಮಲಾಕರ ಭಟ್ ಜೊತೆಗೆ ಶಿವಮೊಗ್ಗದಲ್ಲಿ ವಾಸವಾಗಿದ್ದಳು.
ತಾಯಿಯ ವರ್ತನೆಯಿಂದ ಬೇಸತ್ತ ಮಗಳು ತಂದೆಯ ಸೂಚನೆಯಂತೆ ಶಿವಮೊಗ್ಗದಿಂದ ಸಿದ್ಧಾಪುರಕ್ಕೆ ಬಂದು ತಾಯಿಯಿಂದಾದ ಹಿಂಸೆ ಹಾಗೂ ಆಕೆಯ ಅಕ್ರಮ ಸಂಬಂಧದ ಬಗ್ಗೆ ಸಿದ್ದಾಪುರದ ಪೋಲಿಸರು, ಶಿರಸಿಯ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ತಂದೆ ಮಹೇಶ್ ಕುಟುಂಬದ ಬಳಿ ತಿಳಿಸಿದ್ದಳು.
ಇದರಿಂದ ಕೋಪಗೊಂಡ ಸುಚಿತ್ರಾ ಹಾಗೂ ಅವಳ ತಂದೆ ಲೋಕನಾಥ ನಾಲ್ಕು ಜನ ಗೂಂಡಾಗಳ ಜೊತೆಗೆ ಸಿದ್ದಾಪುರ ಅವರಗುಪ್ಪ ಗ್ರಾಮದ ಮಹೇಶನ ಮನೆಗೆ ಏಕಾಏಕಿ ದಾಳಿಮಾಡಿ ಅಲ್ಲೇ ಇದ್ದ ಮಹೇಶ, ಆತನ ಅಣ್ಣ ವಸಂತ ಹಾಗೂ ಸಹಾಯಕ್ಕೆ ಬಂದ ಕುಮಾರನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಈ ಘಟನೆಯಲ್ಲಿ ಎದೆಗೆ ಚಾಕು ಚುಚ್ಚಿದ್ದರಿಂದ ವಸಂತ ನಾಯ್ಕ ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳು ಮಹೇಶ ನಾಯ್ಕ ಹಾಗೂ ಕುಮಾರ್ನನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯಲ್ಲಿ ಭಾಗಿಯಾದ ಸಿದ್ಧಾಪುರ ಹೊಸೂರಿನ ಸುಚಿತ್ರಾ, ಆಕೆಯ ತಂದೆ ಶಿವಮೊಗ್ಗದ ಲೋಕನಾಥ ಚೌಡಪ್ಪ ನಾಯ್ಕ, ಹೆಮ್ಮನಬೈಲಿನ ಜ್ಯೋತಿಷಿ ಕಮಲಾಕರ ಭಟ್, ಆತನ ಕಚೇರಿ ಸಿಬ್ಬಂದಿ ಆಕಾಶ್, ಫೈಸಲ್, ಮೆಹಫೂಸ್, ಇರ್ಫಾನ್ ಅಮಾನುಲ್ಲಾಗೆ ಈಗ ನ್ಯಾಯಾಂಗ ಬಂಧನವಾಗಿದ್ದು, ಈಗ ಸ್ವಾಮೀಜಿ ಸೇರಿದಂತೆ ಎಲ್ಲಾ ಆರೋಪಿಗಳು ಕಂಬಿ ಎಣಿಸುವಂತಾಗಿದೆ.
