Bhatkal| ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹಿಂದುಗಳ ನಂಬಿಕೆಯ ಧಾರ್ಮಿಕ ಸ್ಥಾನ ಮುರಿನಕಟ್ಟೆಯನ್ನು ಧ್ವಂಸಗೊಳಿಸಿರುವುದನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ಖಂಡಿಸಿದ್ದಾರೆ. ಓಟ್ ಬ್ಯಾಂಕ್ ಓಲೈಕೆ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಈ ಧ್ವಂಸ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ‘X’ ನಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು, ತಮ್ಮನ್ನು ಯಾರೂ ಏನೂ ಮಾಡುವುದಿಲ್ಲ ಎನ್ನುವ ಧೈರ್ಯದಿಂದ ದುಷ್ಕರ್ಮಿಗಳ ಅಟ್ಟಹಾಸ ಮಿತಿಮೀರಿದೆ. ಭಟ್ಕಳದ ಮುರಿನಕಟ್ಟೆಯನ್ನು ಧ್ವಂಸಗೊಳಿಸಿ, ಅದನ್ನು ತಡೆಯಲು ಯತ್ನಿಸಿದ ರಾಜ್ಯದ ಪೊಲೀಸ್ ಸಿಬ್ಬಂದಿಯ ಮೇಲೆಯೇ ಉದ್ರಿಕ್ತ ಗುಂಪು ಹಲ್ಲೆ ನಡೆಸಿರುವುದು ಅತ್ಯಂತ ಆತಂಕಕಾರಿ ಮತ್ತು ಖಂಡನೀಯ. ಮಾರಿಯಮ್ಮನ ಹೊರೆ ಇಳಿಸುತ್ತಿದ್ದ ಹೆದ್ದಾರಿ ಅಗಲೀಕರಣದ ವೇಳೆ ತೆರವುಗೊಳಿಸಿದ್ದ ಮುರಿನಕಟ್ಟೆಯನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪುನಃ ಸ್ಥಾಪಿಸಿದ್ದ ಕಟ್ಟೆಯನ್ನು ದುಷ್ಕರ್ಮಿಗಳು ಕೆಡವಿರುವುದು ಶಾಂತಿ ಕದಡುವ ಹುನ್ನಾರ ಮಾತ್ರವಲ್ಲ, ಇದು ಕೋಮುದ್ವೇಷದ ಬೆಂಕಿ ಹಚ್ಚುವ ಕಾರ್ಯ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ನಿರಂತರ ತುಷ್ಟೀಕರಣ ಮತ್ತು ಓಲೈಕೆ ರಾಜಕೀಯ, ಸಮಾಜವಿರೋಧಿ ಶಕ್ತಿಗಳಿಗೆ ಎಗ್ಗಿಲ್ಲದ ಧೈರ್ಯ ನೀಡಿರುವುದು ಸುಸ್ಪಷ್ಟ. ಧಾರ್ಮಿಕ ಶ್ರದ್ಧಾ ಸ್ಥಾನವನ್ನು ಕೆಡವುದರ ಜೊತೆಗೆ ರಕ್ಷಣೆ ನೀಡಬೇಕಾದ ನಮ್ಮ ಪೊಲೀಸ್ ಪಡೆಯ ನೈತಿಕತೆಯನ್ನೇ ಕುಗ್ಗಿಸುವ ಕೃತ್ಯಗಳು ರಾಜ್ಯಕ್ಕೆ ಕಂಟಕಪ್ರಾಯ ಮಾತ್ರವಲ್ಲ, ಈ ಓಟ್ ಬ್ಯಾಂಕ್ ಓಲೈಕೆ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ. ಸಮಾಜದ ಶಾಂತಿ ಕೆಡಿಸಿ, ಅಟ್ಟಹಾಸ ಮೆರೆದ ಮತ್ತು ಪೊಲೀಸರ ಮೇಲೆ ಕೈಮಾಡಿದ ಪ್ರತಿಯೊಬ್ಬ ದುಷ್ಕರ್ಮಿಗಳನ್ನು ತಕ್ಷಣವೇ ಬಂಧಿಸಿ, ಮುರಿನಕಟ್ಟೆಯನ್ನು ಮತ್ತೆ ನಿರ್ಮಿಸಿ, ಪಕ್ಷಪಾತವಿಲ್ಲದೆ ರಾಜ್ಯ ಸರ್ಕಾರ ಕೂಡಲೇ ಕಠಿಣ ಕ್ರಮಕೈಗೊಳ್ಳಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.
