Karwar| ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬಡವರು ಹಾಗೂ ಮಧ್ಯಮ ವರ್ಗದ ಜನರು ಇದರ ಬಲೆಗೆ ಸಿಲುಕಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ತುರ್ತು ಅವಶ್ಯಕತೆಗಾಗಿ ಸಾಲ ಪಡೆಯುವ ಜನರು ಬಳಿಕ ಹೆಚ್ಚಿನ ಬಡ್ಡಿದರದ ಒತ್ತಡ ತಾಳಲಾರದೆ ಕಂಗಾಲಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೀಟರ್ ಬಡ್ಡಿ ದಂಧೆಕೋರರು ಖಾಲಿ ಚೆಕ್, ಸ್ಟಾಂಪ್ ಪೇಪರ್, ದಾಖಲೆ ಪತ್ರಗಳನ್ನು ಪಡೆದು ಜನರನ್ನು ಬೆದರಿಸುವ ಪ್ರಕರಣಗಳೂ ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ದಾಂಡೇಲಿಯಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುವವನ ಮನೆ ಮೇಲೆ ಪೋಲಿಸರು ನಡೆಸಿದ ದಾಳಿಯಲ್ಲಿ ಮೀಟರ್ ಬಡ್ಡಿ ದಂಧೆಗೆ ಸಂಬಂಧಿಸಿದಂತೆ ಖಾಲಿ ಚೆಕ್ಗಳು ಹಾಗೂ ಹಲವು ದಾಖಲೆಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕಾರವಾರದಲ್ಲೂ ಸಹ ಮೀಟರ್ ಬಡ್ಡಿ ವ್ಯವಹಾರ ವ್ಯಾಪಕವಾಗಿದೆ. ಬಡ ವ್ಯಾಪಾರಿಯೊಬ್ಬ ತುರ್ತು ಅಗತ್ಯಕ್ಕಾಗಿ ಪಡೆದ ಎರಡು ಲಕ್ಷ, ಸುಮಾರು ಮೂರು ಲಕ್ಷ ಕಟ್ಟಿದರೂ ಸಹ ಅಸಲು ಸ್ವಲ್ಪವೂ ಕಡಿಮೆ ಆಗಿಲ್ಲ. ಅದಲ್ಲದೇ ದಿನಬೆಳಗಾದರೆ ಬಡ್ಡಿ ನೀಡಿದವನ ಕಿರುಕುಳ ತಾಳಲಾರದೇ ಊರೇ ಬಿಟ್ಟಿದ್ದಾನೆ ಎನ್ನಲಾಗುತ್ತಿದೆ.
ಹೆಚ್ಚಿನ ಬಡ್ಡಿ ಕಟ್ಟಲಾಗದೆ ಹಲವರು ಆರ್ಥಿಕವಾಗಿ ಕುಸಿಯುತ್ತಿರುವುದಲ್ಲದೆ, ಕೆಲವರು ಮಾನಸಿಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ ಎನ್ನಲಾಗಿದೆ. ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಈ ದಂಧೆ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಜನರು ಕಾನೂನುಬಾಹಿರ ಸಾಲ ವ್ಯವಹಾರಗಳಿಂದ ದೂರವಿರಬೇಕು ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಟ್ಟಾರೆ ಈ ಮೀಟರ್ ಬಡ್ಡಿ ಬಗ್ಗೆ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ‘ಬಡ್ಡಿ ಮಕ್ಕಳ’ ವ್ಯವಹಾರಕ್ಕೆ ಬ್ರೇಕ್ ಹಾಕುತ್ತಾರೆಯೇ ಎಂಬುದು ಕಾದು ನೋಡಬೇಕಾಗಿದೆ.
