Karwar| ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಮೀಟರ್ ಬಡ್ಡಿ ದಂಧೆಕೋರರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ಮುಂದಾಗಿದ್ದು, ಮುಂಡಗೋಡ, ಶಿರಸಿ, ಬನವಾಸಿ ಹಾಗೂ ಯಲ್ಲಾಪುರದಲ್ಲಿ ಬಡ್ಡಿ ಕುಳಗಳು ಸೇರಿದಂತೆ ರೌಡಿ ಶೀಟರ್ ಗಳ ಮನೆಗಳ ಮೇಲೆ ಬುಧವಾರ ಪೋಲಿಸರು ದಾಳಿ ನಡೆಸಿದ್ದಾರೆ.

ಮುಂಡಗೋಡದಲ್ಲಿ ಮೀಟರ್ ಬಡ್ಡಿ ದಂಧೆಯ ಮೂರು ಜನ  ರೌಡಿ ಶೀಟರ್ ಮನೆಗಳ ಮೇಲೆ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೇತೃತ್ವದಲ್ಲಿ ಇಂದು ಬುಧವಾರ ಬೆಳಗ್ಗೆ ದಾಳಿ ನಡೆಸಲಾಗಿದೆ. ರೌಡಿ ಶೀಟರ್ ಗಳಾದ ಕಿರಣ್ ಸೋಳಂಕಿ , ಸಂಜು ನಾವಳೆ , ಮಲ್ಲಿಕ್ ಜಾನ್ ಮನೆ ಮೇಲೆ ದಾಳಿ ನಡೆಸುವ ಜೊತೆಗೆ ಒಟ್ಟು 14 ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ರೌಡಿ ಶೀಟರ್ ಗಳ ಮನೆಯಲ್ಲಿ ಕೆಲವು ಚೆಕ್ ಹಾಗೂ ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ.

ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಅಹ್ಮದ್ ಕೊಲೆ ಬೆನ್ನಲ್ಲೆ ಮುಂಡಗೋಡ ಮೀಟರ್ ಬಡ್ಡಿ ದಂಧೆಯನ್ನ ಗಂಭೀರವಾಗಿ ಪರಿಗಣಿಸಿರುವ ಎಸ್ಪಿ ದೀಪನ್,
ಮೀಟರ್ ಬಡ್ಡಿ ದಂಧೆ ಕಿಂಗ್ ಪಿನ್ ಜಮೀರ್ ಕೊಲೆ ಬಳಿಕ ಎರಡನೇ ಬಾರಿಗೆ ರೌಡಿ ಶೀಟರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕೆಲವು ದಿನದ ಹಿಂದೆಯಷ್ಟೇ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ ರೌಡಿ ಶೀಟರ್ ಗಳನ್ನ ಗಡಿಪಾರು ಸಹ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮೀಟರ್ ಬಡ್ಡಿ ಕುಳಗಳ ಆಟಾಟೋಪ ಇತ್ತಿಚೀನ ದಿನಗಳಲ್ಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹೆಚ್ಚುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಅಸಮಾಧಾನ‌ ವ್ಯಕ್ತವಾಗಿತ್ತು. ಬಡ್ಡಿ‌ ಹೆಸರಿನಲ್ಲಿ ಸಾಲ ಪಡೆದವರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಹೆಚ್ಚಿತ್ತು. ಸಾಲ ಪಡೆದವರು ಬಡ್ಡಿ ಕುಳಗಳ ಕಿರಿಕಿರಿ ತಾಳಲಾರದೇ ಒದ್ದಾಡುತ್ತಿದ್ದರೆನ್ನಲಾಗಿದೆ. ಬಡ್ಡಿ ಕುಳಗಳ ಮೇಲಿನ ಪೋಲಿಸರ ದಾಳಿಗೆ ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.